ಅಮೆರಿಕದ ಯೂಜಿನ್ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ (World Athletic Championship) ಭಾನುವಾರ ನಡೆಯುವ ಜಾವೆಲಿನ್ (Javelin)ಥ್ರೋ ಈವೆಂಟ್ ಬಗ್ಗೆ ಎಲ್ಲರ ಕಣ್ಣಿದೆ. ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿದ್ದ ನೀರಜ್ ಚೋಪ್ರಾ ಫೈನಲ್ ತಲುಪಿದ್ದು, ಸ್ವರ್ಣದ ಆಸೆಯನ್ನು ಹೆಚ್ಚಿಸಿದೆ. ಸದ್ಯ ಇರುವ ಲೆಕ್ಕಾಚಾರದಂತೆ ನೀರಜ್ (Neeraj Chopra) ಸುಲಭವಾಗಿ ಚಿನ್ನದ ಪದಕವನ್ನು ಭಾರತಕ್ಕೆ ಗೆದ್ದುಕೊಡುತ್ತಾರೆ ಅನ್ನುವ ನಂಬಿಕೆ ಇದೆ.
ಈ ಮಧ್ಯೆ ಮಹಿಳಾ ವಿಭಾಗದ ಜಾವೆಲಿನ್ ಥ್ರೋನಲ್ಲಿ ಫೈನಲ್ ತಲುಪಿದ್ದ ಅನ್ನುರಾಣಿ (Annu Rani) ಅಂತಿಮ ಹಂತದಲ್ಲಿ ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಇದರ ಪರಿಣಾಮವಾಗಿ ಅನ್ನುರಾಣಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಹಾಗಾಗಿದೆ. ಕೇವ; 61.12ಮೀಟರ್ ದೂರ ಜಾವೆಲಿನ್ ಎಸೆಯಲು ಮಾತ್ರ ಅನ್ನುರಾಣಿಗೆ ಸಾಧ್ಯವಾಯಿತು. ಸತತ 2ನೇ ಬಾರಿಗೆ ವಿಶ್ವ ಅಥ್ಲೆಟಿಕ್ಚಾಂಪಿಯನ್ಶಿಪ್ ಫೈನಲ್ಗೇರಿದರೂ ಅನ್ನುರಾಣಿ ಪದಕದಿಂದ ದೂರವೇ ಉಳಿದರು.
ಅನ್ನು ಮೊದಲ ಪ್ರಯತ್ನದಲ್ಲಿ 56.18 ಮೀ ಜಾವೆಲಿನ್ ಎಸೆದರೆ, ಎರಡನೇ ಪ್ರಯತ್ನದಲ್ಲಿ 61.12 ಮೀ ದೂರ ಎಸೆದರು. ಉಳಿದ ಪ್ರಯತ್ನಗಳಲ್ಲಿ ಅವರು ಮುನ್ನಡೆ ಸಾಧಿಸಲಿಲ್ಲ. ಅಷ್ಟೇ ಅಲ್ಲ ತನ್ನ ಅತ್ಯುತ್ತಮ ದೂರ 63.82 ಮೀಟರ್ ಅನ್ನು ಕೂಡ ತಲುಪಲು ಸಾಧ್ಯವಾಗಲಿಲ್ಲ. ಕ್ವಾಲಿಫಿಕೇಷನ್ನಲ್ಲಿ ಅನ್ನು 8ನೇಯವರಾಗಿ ಫೈನಲ್ ಪ್ರವೇಶಿಸಿದ್ದರು.
ಆಸ್ಟ್ರೇಲಿಯಾದ ಕೆಲ್ಸಿ ಲಿ ಬಾರ್ಬರ್ 66.91 ಮೀಟರ್ ದೂರಗಳೊಂದಿಗೆ ಸ್ವರ್ಣಪದಕ ಗೆದ್ದರೆ, ಅಮೆರಿಕದ ಕಾರಾ ವಿಂಗರ್ ಬೆಳ್ಳಿ ಹಾಗೂ ಜಪಾನ್ನ ಹರುಕಾ ಕಿಟಗುಚಿ ಕಂಚಿನ ಪದಕಕ್ಕೆಕೊರಳೊಡ್ಡಿದರು. ಒಲಿಂಪಿಕ್ ಚಾಂಪಿಯನ್ ಚೀನಾದ ಶಿಯಿಗ್ ಲಿಯು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.