ಜೋಶುವಾ ಡʼಸಿಲ್ವಾ(100*) ಚೊಚ್ಚಲ ಶತಕ ಹಾಗೂ ಕೈಲ್ ಮೇಯರ್ಸ್ (5/9) ಮಾರಕ ಬೌಲಿಂಗ್ ನೆರವಿನಿಂದ ತವರಿನಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯ ಮರೆದಿರುವ ವೆಸ್ಟ್ ಇಂಡೀಸ್, ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ ಮತ್ತೊಂದು ಟೆಸ್ಟ್ ಸರಣಿ ಗೆಲುವಿನತ್ತ ದಾಪುಗಾಲಿಟ್ಟಿದೆ.
ಗ್ರೆನಡಾದ ಸೆಂಟ್ ಜಾರ್ಜ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಅದ್ಭುತ ಪ್ರದರ್ಶನ ನೀಡಿತು. ಮೊದಲ ಇನ್ನಿಂಗ್ಸ್ನಲ್ಲಿ 297 ರನ್ಗಳಿಗೆ ಆಲೌಟ್ ಆದ ವಿಂಡೀಸ್, 93 ರನ್ಗಳ ಉತ್ತಮ ಮುನ್ನಡೆ ಪಡೆಯಿತು. ನಂತರ 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, 8 ವಿಕೆಟ್ ನಷ್ಟಕ್ಕೆ 103 ರನ್ಗಳಿಸಿದ್ದು, ಕೇವಲ 10 ರನ್ಗಳ ಮುನ್ನಡೆ ಹೊಂದಿದೆ. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್(9*) ಹಾಗೂ ಜ್ಯಾಕ್ ಲೀಚ್(1*) 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ನೀಡಿದ 93 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಸ್(31) ಹಾಗೂ ಜ್ಯಾಕ್ ಕ್ರಾಲಿ(8) ಜೋಡಿ ಕೇವಲ 14 ರನ್ಗಳಿಗೆ ಬೇರ್ಪಟ್ಟಿತು. ನಂತರ ಬಂದ ನಾಯಕ ಜೋ ರೂಟ್(5), ಡಾನ್ ಲಾರೆನ್ಸ್(0) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್(4) ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು.
ನಂತರ ಜೊತೆಯಾದ ಅಲೆಕ್ಸ್ ಲೀಸ್(31) ಹಾಗೂ ಜಾನಿ ಬೈರ್ಸ್ಟೋವ್(22) 5ನೇ ವಿಕೆಟ್ಗೆ 41 ರನ್ಗಳ ಜೊತೆಯಾಟವಾಡಿ ವಿಂಡೀಸ್ ಬೌಲರ್ಗಳ ವಿರುದ್ಧ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಆದರೆ ಇವರಿಬ್ಬರು ನಿರ್ಗಮನದ ಬಳಿಕ ಬಂದ ಬೆನ್ ಫೋಕ್ಸ್(2) ಹಾಗೂ ಕ್ರೆಗ್ ಓವರ್ಟನ್(1) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದರು. ಪರಿಣಾಮ ಇಂಗ್ಲೆಂಡ್ 3ನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 103 ರನ್ಗಳಿಸಿದ್ದು, ಕೇವಲ 10 ರನ್ ಮುನ್ನಡೆ ಹೊಂದಿರುವ ಪ್ರವಾಸಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ.
ಮೇಯರ್ಸ್ ಮಾರಕ ಬೌಲಿಂಗ್:
2ನೇ ಇನ್ನಿಂಗ್ಸ್ನಲ್ಲಿ ಉತ್ತಮ ಮೊತ್ತ ಕಲೆಹಾಕುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ಗೆ ಆಲ್ರೌಂಡರ್ ಕೈಲ್ ಮೇಯರ್ಸ್ ಕಂಟಕವಾದರು. ಇನ್ನಿಂಗ್ಸ್ ಆರಂಭದಿಂದಲೇ ಅಬ್ಬರಿಸಿದ ಮೇಯರ್ಸ್, ಇಂಗ್ಲೆಂಡ್ ಬ್ಯಾಟ್ಸಮನ್ಗಳಿಗೆ ಕಡಿವಾಣ ಹಾಕಿದರು. 13 ಓವರ್ಗಳಲ್ಲಿ ಕೇವಲ 9 ರನ್ ನೀಡಿ 5 ವಿಕೆಟ್ ಪಡೆದ ಮೇಯರ್ಸ್, ಆಂಗ್ಲರ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಜೋಶುವಾ ಚೊಚ್ಚಲ ಶತಕ:
ಇದಕ್ಕೂ ಮುನ್ನ8/232 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ಗೆ ಜೋಶುವಾ ಡʼಸಿಲ್ವಾ(100*) ಆಸರೆಯಾದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಜವಾಬ್ದಾರಿಯ ಆಟವಾಡಿದ ಜೋಶುವಾ, ಟೆಸ್ಟ್ ಕ್ರಿಕೆಟ್ನ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಪರಿಣಾಮ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ 297 ರನ್ಗಳಿಸಿತು.