ನಾಯಕ ಶಕೀಬ್-ಅಲ್-ಹಸನ್(63) ಹಾಗೂ ನರುಲ್ ಹಸನ್(64) ಅವರ ಜವಾಬ್ದಾರಿಯುತ ಆಟದ ನಡುವೆಯೂ ಪ್ರಾಬಲ್ಯ ಮೆರೆದ ವೆಸ್ಟ್ ಇಂಡೀಸ್, ಕೇಮರ್ ರೋಚ್(5/53) ಪರಿಣಾಮಕಾರಿ ಬೌಲಿಂಗ್ನಿಂದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಗೆಲುವಿನತ್ತ ಮುಖ ಮಾಡಿದೆ.
ಆಂಟಿಗುವಾದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದಲ್ಲಿ ಬಾಂಗ್ಲಾ ಬ್ಯಾಟ್ಸ್ಮನ್ಗಳು ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಪರಿಣಾಮ 2ನೇ ಇನ್ನಿಂಗ್ಸ್ನಲ್ಲಿ 245 ರನ್ ಕಲೆಹಾಕಿದ ಬಾಂಗ್ಲಾ ಪಡೆ, ವೆಸ್ಟ್ ಇಂಡೀಸ್ಗೆ 84 ರನ್ಗಳ ಟಾರ್ಗೆಟ್ ನೀಡಿತು. ಈ ಗುರಿಯನ್ನು ಬೆನ್ನತ್ತಿದ ವಿಂಡೀಸ್, ದಿನದಂತ್ಯಕ್ಕೆ 49/3 ರನ್ ಕಲೆಹಾಕಿದ್ದು, 35 ರನ್ಗಳ ಹಿನ್ನಡೆಯೊಂದಿಗೆ ದಿನದಾಟ ಮುಗಿಸಿದೆ. 3ನೇ ದಿನದ ಆರಂಭದಲ್ಲಿ 50/2 ರನ್ಗಳಿಂದ ದಿನದಾಟ ಆರಂಭಿಸಿದ ಬಾಂಗ್ಲಾದೇಶ ಬ್ಯಾಟಿಂಗ್ ವೈಫಲ್ಯ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಮಹಮದುಲ್ಲಾ ಹಸನ್(42) ಹಾಗೂ ಶಂಟೊ(17) ಅಲ್ಪಮೊತ್ತದ ರನ್ ಕಲೆಹಾಕಿ ಹೊರನಡೆದರು. ಆದರೆ ನಂತರ ಬಂದ ಮೊಮಿನುಲ್(4) ಹಾಗೂ ಲಿಟನ್ ದಾಸ್(17) ನಿರೀಕ್ಷಿತ ಆಟವಾಡಲಿಲ್ಲ. ಪರಿಣಾಮ 109ಕ್ಕೆ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ್ ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತು.
ಶಕೀಬ್-ಹಸನ್ ಆಸರೆ:
ಈ ಹಂತದಲ್ಲಿ ಜೊತೆಯಾದ ನಾಯಕ ಶಕೀಬ್-ಅಲ್-ಹಸನ್(63) ಹಾಗೂ ನರುಲ್ ಹಸನ್(64) ತಂಡಕ್ಕೆ ಆಸರೆಯಾದರು. 6ನೇ ವಿಕೆಟ್ಗೆ 121 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ ಈ ಜೋಡಿ, ತಂಡವನ್ನು ಇನ್ನಿಂಗ್ಸ್ ಸೋಲಿನ ಭೀತಿಯಿಂದ ಪಾರು ಮಾಡಿತು. ಆದರೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಯಾವುದೇ ಆಟಗಾರರು ನೆಲಕಚ್ಚಿ ಆಡಲಿಲ್ಲ. ಪರಿಣಾಮ ಬಾಂಗ್ಲಾದೇಶ 245 ರನ್ಗಳಿಗೆ ಆಲೌಟ್ ಆಯಿತು. ವೆಸ್ಟ್ ಇಂಡೀಸ್ ಪರ ಕೇಮರ್ ರೋಚ್(5/53) ಬಾಂಗ್ಲಾದೇಶ್ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಅಲ್ಜಾರಿ ಜೋಸೆಫ್(3/55), ಮಯರ್ಸ್(2/30) ಉತ್ತಮ ಬೌಲಿಂಗ್ ದಾಳಿ ನಡೆಸಿದರು.
ಗೆಲುವಿನತ್ತ ವಿಂಡೀಸ್:
ಬಾಂಗ್ಲಾದೇಶ್ ನೀಡಿದ 84 ರನ್ಗಳ ಸುಲಭದ ಟಾರ್ಗೆಟ್ ಎದುರಿಸಿದ ವೆಸ್ಟ್ ಇಂಡೀಸ್ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕ್ರೇಗ್ ಬ್ರಾಥ್ವೇಟ್(1) ಬಹುಬೇಗನೆ ನಿರ್ಗಮಿಸಿದರೆ. ನಂತರ ಬಂದ ರೈಮ್ನೋನ್ ರೈಫರ್(2) ಹಾಗೂ ಬೋನರ್(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇದರ ಪರಿಣಾಮ 9 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್ ಆಘಾತ ಅನುಭವಿಸಿತು. ಈ ಹಂತದಲ್ಲಿ ಜೊತೆಯಾದ ಜಾನ್ ಕ್ಯಾಂಪ್ಬೆಲ್(28*) ಹಾಗೂ ಬ್ಲ್ಯಾಕ್ವುಡ್(17*) 4ನೇ ವಿಕೆಟ್ಗೆ ಅಜೇಯ 40* ರನ್ಗಳ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು. ಸದ್ಯ 3ನೇ ದಿನದಂತ್ಯಕ್ಕೆ 49/3 ವಿಕೆಟ್ ಕಳೆದುಕೊಂಡಿರುವ ವೆಸ್ಟ್ ಇಂಡೀಸ್, ಗೆಲುವಿಗೆ 35 ರನ್ಗಳಿಸಬೇಕಿದೆ.