ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಿಂದ ವಿರಾಮ ಪಡೆದಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮಾರ್ಚ್ 4 ರಿಂದ ಪ್ರಾರಂಭವಾಗಲಿದ್ದು, ಇದಕ್ಕಾಗಿ ಕೊಹ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ್ದಾರೆ.
ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ವಿರಾಟ್ ಕೊಹ್ಲಿಗೆ 100ನೇ ಟೆಸ್ಟ್ ಆಗಿದೆ. ಕೊಹ್ಲಿ 100 ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವದ 71ನೇ ಹಾಗೂ ಭಾರತದಲ್ಲಿ 11ನೇ ಆಟಗಾರನಾಗಲಿದ್ದಾರೆ. ವಿರಾಟ್ ಇದುವರೆಗೆ 99 ಟೆಸ್ಟ್ಗಳಲ್ಲಿ 50.39 ಸರಾಸರಿಯಲ್ಲಿ 7962 ರನ್ ಗಳಿಸಿದ್ದಾರೆ, ಅವರ ಹೆಸರಿನಲ್ಲಿ 27 ಶತಕಗಳಿವೆ. ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಿರಲಿಲ್ಲ ಹಾಗಾಗಿ ಶ್ರೀಲಂಕಾ ವಿರುದ್ಧದ ನೂರನೇ ಟೆಸ್ಟ್ ನಲ್ಲಿ ಶತಕ ಸಿಡಿಸುವ ನಿರೀಕ್ಷೆ ಇದೆ.
ಕೊಹ್ಲಿ ಹೊರತಾಗಿ ರವಿಚಂದ್ರನ್ ಅಶ್ವಿನ್, ರಿಷಬ್ ಪಂತ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಸೌರಭ್ ಕುಮಾರ್, ಕೆಎಸ್ ಭರತ್ ಮತ್ತು ಶುಭಮನ್ ಗಿಲ್ ಕೂಡ ನೆಟ್ಸ್ನಲ್ಲಿ ಹೆಚ್ಚು ಬೆವರು ಹರಿಸಿದರು. ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಿಂದ ಕೊಹ್ಲಿಯಂತೆ ಪಂತ್ಗೆ ವಿಶ್ರಾಂತಿ ನೀಡಲಾಗಿದ್ದು, ಗಿಲ್ ಗಾಯದಿಂದ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ವಿರಾಟ್ 9 ಟೆಸ್ಟ್ ಪಂದ್ಯಗಳಲ್ಲಿ 77.23 ಸರಾಸರಿಯಲ್ಲಿ 1004 ರನ್ ಗಳಿಸಿದ್ದಾರೆ. ಅವರು 15 ಇನ್ನಿಂಗ್ಸ್ಗಳಲ್ಲಿ 5 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಶ್ರೀಲಂಕಾ 2017-18ರಲ್ಲಿ ಕೊನೆಯ ಬಾರಿಗೆ ಭಾರತ ಪ್ರವಾಸ ಕೈಗೊಂಡಾಗ ನಾಯಕನಾಗಿ ವಿರಾಟ್ ಮೂರು ಟೆಸ್ಟ್ ಪಂದ್ಯಗಳಲ್ಲಿ 610 ರನ್ ಗಳಿಸಿದ್ದರು.
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಮೊಹಾಲಿ ಟೆಸ್ಟ್ ಪಂದ್ಯ ಅಭಿಮಾನಿಗಳಿಲ್ಲದೆ ನಡೆಯಲಿದೆ. ಈ ಪಂದ್ಯದಲ್ಲಿ ಪ್ರೇಕ್ಷಕರಿಗೆ ಪ್ರವೇಶ ಇರುವುದಿಲ್ಲ. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಸಿಇಒ ದೀಪಕ್ ಶರ್ಮಾ ಅವರು, ‘ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಯಾವುದೇ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.