Virat kohli – ಸ್ಫೂರ್ತಿ ಮತ್ತು ಕಠಿಣ ಪರಿಶ್ರಮ – ವಿರಾಟ್ ಕೊಹ್ಲಿಯ ಯಶಸ್ಸಿನ ಗುಟ್ಟು…!

ವಿರಾಟ್ ಕೊಹ್ಲಿ.. ತನ್ನ ನೂರನೇ ಟೆಸ್ಟ್ ಪಂದ್ಯವನ್ನು ಆಡಲಿರುವ ಭಾರತದ 12ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಮಾರ್ಚ್ 4ರಿಂದ ಮೊಹಾಲಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಗೆ ಐತಿಹಾಸಿಕ ಪಂದ್ಯವಾಗಲಿದೆ.
ಕೊಹ್ಲಿಯವರ ನೂರನೇ ಟೆಸ್ಟ್ ಪಂದ್ಯದ ವೇಳೆ ಮಾಜಿ ಕೋಚ್ ಡೇವ್ ವಾಟ್ಮೋರ್ ಅವರು ಹಲವು ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
2007-2008ರ 19 ವಯೋಮಿತಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ನಾಯಕನಾಗಿದ್ದವರು ವಿರಾಟ್ ಕೊಹ್ಲಿ. ತಂಡದ ಕೋಚ್ ಆಗಿದ್ದವರು ಡೇವ್ ವಾಟ್ಮೋರ್.
ಆರಂಭದ ದಿನಗಳಿಂದಲೇ ಡೇವ್ ವಾಟ್ಮೋರ್ ಅವರು ವಿರಾಟ್ ಕೊಹ್ಲಿಯವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಗುರುತಿಸಿದ್ದಾರೆ.
ವಿರಾಟ್ ಕೊಹ್ಲಿಯವರ ಬದ್ಧತೆ, ಕಠಿಣ ಪರಿಶ್ರಮ ಮತ್ತು ಕಲಿಯುವ ಗುಣದಿಂದಲೇ ಇವತ್ತು ಈ ಮಟ್ಟಕ್ಕೆ ಬೆಳೆದಿರುವುದು ಎನ್ನುವುದು ಡೇವ್ ವಾಟ್ಮೋರ್ ಅವರ ಅಭಿಮತವಾಗಿದೆ.
ವಿರಾಟ್ ಎಲ್ಲಾ ಹುಡುಗರ ಹಾಗೇ ಇರಲಿಲ್ಲ. ಪ್ರತಿ ದಿನ ಕೋಚ್ ಬಳಿ ಸಲಹೆಗಳನ್ನು ಕೇಳುತ್ತಿರಲಿಲ್ಲ. ತನ್ನ ತಪ್ಪುಗಳು ಏನು ಎಂಬುದನ್ನು ಅವರು ತಿಳಿದುಕೊಳ್ಳುತ್ತಿದ್ದರು. ಒಂದು ಬಾರಿ ಮಾಗದರ್ಶನ ಕೊಟ್ರೆ ಸಾಕು. ಅದನ್ನು ಯಾವ ರೀತಿ ಸುಧಾರಣೆ ಮಾಡಿಕೊಳ್ಳಬೇಕು. ಅದಕ್ಕಾಗಿ ಯಾವ ರೀತಿಯ ಅಭ್ಯಾಸ ನಡೆಸಬೇಕು ಎಂಬುದನ್ನು ಅವರು ಸ್ವಪ್ರಯತ್ನದಿಂದ ಮಾಡುತ್ತಿದ್ದರು ಎಂದು ಡೇವ್ ವಾಟ್ಮೋರ್ ಅವರು ಕೊಹ್ಲಿಯ ಕ್ರಿಕೆಟ್ ಜರ್ನಿಯ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಆಕ್ರಮಣಕಾರಿ ಪ್ರವೃತ್ತಿ ಮತ್ತು ವೇಗವಾಗಿ ರನ್ ಗಳಿಸಬೇಕು ಎಂಬ ಆತುರ ವಿರಾಟ್ ಕೊಹ್ಲಿಯವರಲ್ಲಿತ್ತು. ಹೀಗಾಗಿ ಕೆಲವೊಂದು ಅಸಡ್ಡೆಯ ಹೊಡೆತಗಳಿಂದ ಔಟ್ ಆಗುತ್ತಿದ್ದರು. ಆಗ ನಾನು ಅವರಿಗೆ ಸಲಹೆ ನೀಡಿದ್ದೆ. ಪಂದ್ಯದ ಗತಿಯನ್ನು ಅರಿತುಕೊಂಡು ಆಡಬೇಕು. ಕನಿಷ್ಠ 40 ಓವರ್ ಗಳ ತನಕ ತಾಳ್ಮೆಯಿಂದ ಆಡಿ ಆನಂತರ ಪರಿಸ್ಥಿತಿಯನ್ನು ಅರಿತುಕೊಂಡು ವೇಗವಾಗಿ ಆಡಬೇಕು ಎಂದು. ಅದನ್ನು ಅವರು ಮೈಗೂಡಿಸಿಕೊಂಡಿದ್ದರು. ಅದರಲ್ಲಿ ಯಶ ಸಾಧಿಸಿದ್ದರು. ಹೀಗಾಗಿ ನಾವು 19 ವಯೋಮಿತಿಯಲ್ಲಿ ಅಜೇಯ ತಂಡವಾಗಿ ಚಾಂಪಿಯನ್ ಆಗಿದ್ದೇವು ಎಂದು ಡೇವ್ ವಾಟ್ಮೋರ್ ಹೇಳುತ್ತಾರೆ. Virat kohli wanted to buy first car from IPL money, says Dav Whatmore

ವಿರಾಟ್ ಕೊಹ್ಲಿಯವರಲ್ಲಿ ನಾಯಕತ್ವದ ಗುಣಗಳು ಆಗಲೇ ಇದ್ದವು. ಸಹ ಆಟಗಾರರ ಪ್ರತಿಭೆಯನ್ನು ಗುರುತಿಸುತ್ತಿದ್ದರು. ತಂಡದ ಹೊಂದಾಣಿಕೆ ಮತ್ತು ಸಂಯೋಜನೆ ಯಾವ ರೀತಿ ಇರಬೇಕು ಎಂಬುದು ಅವರಿಗೆ ಗೊತ್ತಿತ್ತು. ಹಾಗೇ ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲೇ ಅರಿತುಕೊಳ್ಳುತ್ತಿದ್ದರು. 2011ರ ವಿಶ್ವಕಪ್ ಗೆಲುವು ವಿರಾಟ್ ಕೊಹ್ಲಿಯವರ ಕ್ರಿಕೆಟ್ ಬದುಕಿಗೆ ಹೊಸ ಬುನಾದಿಯನ್ನು ಹಾಕಿಕೊಟ್ಟಿತ್ತು ಅಂತಾರೆ ಡೇವ್ ವಾಟ್ಮೋರ್.
2008ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಗೆ ಹೆಚ್ಚಿನ ಬೇಡಿಕೆ ಇತ್ತು. ಹೀಗಾಗಿ ಐಪಿಎಲ್ ನಲ್ಲಿ ಸಿಗುವ ಹಣದಲ್ಲಿ ಮಾರುತಿ ಕಾರು ತೆಗೆದುಕೊಳ್ಳಬೇಕು ಅಂತ ತನ್ನ ಗೆಳೆಯರ ಬಳಿ ಹೇಳಿಕೊಳ್ಳುತ್ತಿದ್ದರು. ಅಲ್ಲದೆ ಕಾರು ಕೂಡ ಖರೀದಿ ಮಾಡಿದ್ದರು ಎಂಬ ವಿಷ್ಯವನ್ನು ಕೂಡ ಡೇವ್ ವಾಟ್ಮೋರ್ ಹೇಳಿದ್ದಾರೆ.
ಕಠಿಣ ಪರಿಶ್ರಮ, ಪ್ರೇರಣೆ ಮತ್ತು ತನ್ನ ಲೋಪದೋಷಗಳನ್ನು ಸರಿಪಡಿಸಲು ನೆಟ್ಸ್ ನಲ್ಲಿ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದರು. ನೆಟ್ಸ್ ಅಭ್ಯಾಸಕ್ಕೆ ಹಾಜರು ಆಗುವ ಮೊದಲ ಹಾಗೂ ಹೋಗುವ ಕೊನೆಯ ಆಟಗಾರ ವಿರಾಟ್ ಕೊಹ್ಲಿ. ಹೀಗಾಗಿಯೇ ಇವತ್ತು ವಿರಾಟ್ ಅದ್ಭುತವಾದ ಸಾಧನೆಯನ್ನು ಮಾಡಿರುವುದು ಅನ್ನೋದು ಡೇವ್ ವಾಟ್ಮೋರ್ ಅವರ ಅಭಿಪ್ರಾಯವಾಗಿದೆ.