VIrat kohli team india ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಜರ್ನಿ – ಜಮೈಕಾ ಟು ಮೊಹಾಲಿ

ವಿರಾಟ್ ಕೊಹ್ಲಿ.. ಆಧುನಿಕ ಕ್ರಿಕೆಟ್ ಜಗತ್ತಿನ ರನ್ ರಾಕ್ಷಸ. ಅದು ಟೆಸ್ಟ್ ಪಂದ್ಯವೇ ಆಗಿರಲಿ, ಏಕದಿನ ಪಂದ್ಯವೇ ಆಗಿರಲಿ, ಅಥವಾ ಟಿ-20 ಪಂದ್ಯವೇ ಆಗಿರಲಿ.. ಕೈಯಲ್ಲಿ ಬ್ಯಾಟ್ ಹಿಡಿದು ಅಂಗಣಕ್ಕೆ ಇಳಿದ್ರೆ ದಯೆ,ಕರುಣೆ ಯಾವುದು ಕೂಡ ಇರಲ್ಲ. ಆಕ್ರಮಣಕಾರಿ ಪ್ರವೃತ್ತಿಯಿಂದ ಬ್ಯಾಟ್ ಬೀಸುವ ವಿರಾಟ್ ಕ್ರಿಸ್ ನಲ್ಲಿದ್ದಷ್ಟು ಸಮಯ ರನ್ ಗಳು ನೀರಿನಂತೆ ಹರಿದುಬರುತ್ತವೆ.
ಪ್ರತಿ ಪಂದ್ಯದಲ್ಲೂ ಶತಕವನ್ನು ನಿರೀಕ್ಷೆ ಮಾಡುವ ಅಭಿಮಾನಿಗಳಿಗೆ ಈಗ ವಿರಾಟ್ ಕೊಹ್ಲಿ ನಿರಾಸೆ ಮೂಡಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ವಿರಾಟ್ ಶತಕ ಸಿಡಿಸಿಲ್ಲ. ಹೀಗಾಗಿ ಕೆಲವು ಟೀಕೆಗಳು ಕೇಳಿಬರುತ್ತಿವೆ. ಇನ್ನೊಂದೆಡೆ ಟೀಮ್ ಇಂಡಿಯಾದ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ. ಹೀಗಾಗಿ ವಿರಾಟ್ ಮುಂದಿನ ದಿನಗಳಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಗೆ ಮಾತ್ರ ಸೀಮಿತವಾಗುತ್ತಾರೆ ಅನ್ನೋ ಮಾತುಗಳು ಕೂಡ ಇವೆ.
ಈ ನಡುವೆ, ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಲಿದ್ದಾರೆ. ತನ್ನ ಕ್ರಿಕೆಟ್ ಬದುಕಿನ ನೂರನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಮಾರ್ಚ್ 4ರಿಂದ ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ದ ನಡೆಯುವ ಮೊದಲ ಟೆಸ್ಟ್ ಪಂದ್ಯ ವಿರಾಟ್ ಪಾಲಿಗೆ ಅವಿಸ್ಮರಣೀಯ ಪಂದ್ಯವಾಗಲಿದೆ.
ಅಂದ ಹಾಗೇ ಡೆಲ್ಲಿ ಚೀಕೂ ಮುಂದೊಂದು ದಿನ ವಿಶ್ವದ ಅಗ್ರಮಾನ್ಯ ಕ್ರಿಕೆಟಿಗನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ನೋಡ ನೋಡುತ್ತಲೇ ವಿರಾಟ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಆಧುನಿಕ ಕ್ರಿಕೆಟ್ ನ ರನ್ ಮೇಷಿನ್ ಆಗಿ ರೂಪುಗೊಂಡಿದ್ದಾರೆ.

ಹಾಗೇ ನೋಡಿದ್ರೆ ವಿರಾಟ್ ಕೊಹ್ಲಿಯ ಕ್ರಿಕೆಟ್ ಜರ್ನಿಯೇ ರೋಚಕ. 19 ವಯೋಮಿತಿ ವಿಶ್ವಕಪ್ ಗೆಲ್ಲುವ ಮುನ್ನವೇ ಚೊಚ್ಚಲ ರಣಜಿ ಟೂರ್ನಿಯಲ್ಲಿ ಶತಕ ದಾಖಲಿಸಿ ಸುದ್ದಿ ಮಾಡಿದ್ದರು. ಆನಂತರ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. 2011ರ ವಿಶ್ವಕಪ್ ಗೆಲುವಿನಲ್ಲೂ ವಿರಾಟ್ ಕೊಡುಗೆ ಇದೆ. ಹಾಗಂತ ಟೆಸ್ಟ್ ಕ್ರಿಕೆಟ್ ನಲ್ಲಿ ಅಷ್ಟು ಸುಲಭವಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಲಿಲ್ಲ. ಹಿನ್ನಡೆ ಅನುಭವಿಸಿ ಮತ್ತೆ ಸ್ಥಾನ ಪಡೆದುಕೊಂಡು ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ, ನಾಯಕನಾಗಿ ಯಶ ಸಾಧಿಸಿದ್ದ ಹಿರಿಮೆ ವಿರಾಟ್ ಕೊಹ್ಲಿಯವರದ್ದು.
ವಿರಾಟ್ ಕೊಹ್ಲಿಯವರ ಟೆಸ್ಟ್ ಕ್ರಿಕೆಟ್ ಜರ್ನಿಯ ಹತ್ತು ಘಟ್ಟಗಳು ಈ ಕೆಳಗಿನಂತಿವೆ. VIrat kohli team india – From Jamaica to Mohali: A look at key milestones in Virat Kohli
ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ -2011
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟು ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಮೈಕಾದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಸರಣಿಗೆ ಸಚಿನ್ ತೆಂಡುಲ್ಕರ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ರೆ ವಿರಾಟ್ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 76 ರನ್. ಹೀಗಾಗಿ ಮುಂದಿನ ಇಂಗ್ಲೆಂಡ್ ಸರಣಿಗೆ ಟೆಸ್ಟ್ ತಂಡದಿಂದ ಹೊರಬೀಳಬೇಕಾಯ್ತು.
ವಿರಾಟ್ ಕೊಹ್ಲಿಯ ಮೊದಲ ಅರ್ಧಶತಕ
ತವರಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ವಿರಾಟ್ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಂಡ್ರು. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದಿದ್ದ ಈ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಇನಿಂಗ್ಸ್ ಗಳಲ್ಲೂ ಅರ್ಧಶತಕ ದಾಖಲಿಸಿದ್ದರು.

ವಿರಾಟ್ ಕೊಹ್ಲಿಯವರ ಮೊದಲ ಶತಕ
2012ರಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯನ್ನು ಮಿಸ್ ಮಾಡಿಕೊಂಡ್ರು. ಬಳಿಕ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾದ್ರು. ಮೂರು ಟೆಸ್ಟ್ ಪಂದ್ಯಗಳಲ್ಲಿ ಸಾಧಾರಣ ಮಟ್ಟದ ಪ್ರದರ್ಶನ ನೀಡಿದ್ದ ಕೊಹ್ಲಿ ನಾಯಕ ಧೋನಿಯ ನಂಬಿಕೆಯನ್ನು ಉಳಿಸಿಕೊಂಡಿದ್ದರು. ಹಾಗೇ ಆಡಿಲೇಡ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ್ರು. ಅಲ್ಲದೆ ವಿರಾಟ್ ಕೊಹ್ಲಿ ಭಾರತದ ಭವಿಷ್ಯದ ಆಟಗಾರ ಎಂದು ಬಿಂಬಿತರಾದ್ರು.
ವಿರಾಟ್ ಕೊಹ್ಲಿ ತವರಿನಲ್ಲಿ ದಾಖಲಿಸದ ಮೊದಲ ಟೆಸ್ಟ್ ಶತಕ
2012ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಇದು ವಿರಾಟ್ ತವರಿನಲ್ಲಿ ದಾಖಲಿಸಿದ್ದ ಮೊದಲ ಶತಕವಾಗಿದೆ.
2014ರ ಇಂಗ್ಲೆಂಡ್ ಪ್ರವಾಸದ ಕಹಿ ನೆನಪು
ಅದು 2014. ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ರು. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಆಟವನ್ನಾಡಿದ್ದ ಕೊಹ್ಲಿ ಇಂಗ್ಲೆಂಡ್ ಸರಣಿಯಲ್ಲಿ ರನ್ ಬರ ಎದರಿಸಿದ್ದರು. ಆಡಿರುವ 10 ಇನಿಂಗ್ಸ್ ಗಳಲ್ಲಿ ದಾಖಲಿಸಿದ್ದು ಬರೀ 134 ರನ್. ಇದು ವಿರಾಟ್ ಪಾಲಿಗೆ ಅತ್ಯಂತ ಕೆಟ್ಟ ಟೆಸ್ಟ್ ಸರಣಿ.
ನಾಯಕನಾಗಿ ಮೊದಲ ಟೆಸ್ಟ್ ಪಂದ್ಯ
2014-15. ಆಸ್ಟ್ರೇಲಿಯಾ ವಿರುದ್ದದ ಸರಣಿ. ಇಂಗ್ಲೆಂಡ್ ಸರಣಿಯ ಕಳಪೆ ಪ್ರದರ್ಶನದ ನಡುವೆಯೂ ಆಸ್ಟ್ರೇಲಿಯಾ ಸರಣಿಗೆ ವಿರಾಟ್ ನಾಯಕನಾಗಿ ತಂಡವನ್ನು ಮೊದಲ ಬಾರಿಗೆ ಮುನ್ನಡೆಸಿದ್ದರು. ಧೋನಿ ಗಾಯಗೊಂಡಿದ್ದ ಕಾರಣ ವಿರಾಟ್ ಗೆ ಅವಕಾಶ ಸಿಕ್ಕಿತ್ತು. ನಾಯನಾಗಿ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಕೊಹ್ಲಿ ಎರಡು ಇನಿಂಗ್ಸ್ ಗಳಲ್ಲೂ ಶತಕ ದಾಖಲಿಸಿದ್ದರು. ಈ ಸರಣಿಯ ಮೂರನೇ ಪಂದ್ಯದ ವೇಳೆ ನಾಯಕತ್ವವನ್ನು ತ್ಯಜಿಸಿದ್ದರು. ಸಿಡ್ನಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಮುನ್ನಡೆಸುವ ಮೂಲಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆಯಾದ್ರು. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕು ಶತಕಗಳ ನೆರವಿನೊಂದಿಗೆ 692 ರನ್ ಕಲೆ ಹಾಕಿದ್ದರು.

2018ರಲ್ಲಿ ಇಂಗ್ಲೆಂಡ್ ನಲ್ಲಿ ಕೊಹ್ಲಿ ರನ್ ಮಳೆ..!
2014ರ ಕಳಪೆ ಪ್ರದರ್ಶನದ ನಂತರ ಟೀಮ್ ಇಂಡಿಯಾ 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಐದು ಪಂದ್ಯಗಳ ಸರಣಿಯಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ 593 ರನ್ ದಾಖಲಿಸಿದ್ದರು. ಇದರಲ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕಗಳಿದ್ದವು.
ಟೀಮ್ ಇಂಡಿಯಾದ ಯಶಸ್ವಿ ನಾಯಕ ವಿರಾಟ್ ಕೊಹ್ಲಿ
ನಾಯಕನಾಗಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದರು. 68 ಟೆಸ್ಟ್ ಪಂದ್ಯಗಳಲ್ಲಿ 40 ಟೆಸ್ಟ್ ಪಂದ್ಯಗಳನ್ನು ವಿರಾಟ್ ಗೆದ್ದುಕೊಂಡಿದ್ದಾರೆ. ವಿದೇಶಿ ಮತ್ತು ತವರಿನಲ್ಲಿ ಟೀಮ್ ಇಂಡಿಯಾ ಅಪ್ರತಿಮ ಸಾಧನೆ ಮಾಡಿತ್ತು. ಅಷ್ಟೇ ಅಲ್ಲ, ವಿರಾಟ್ ಸಾರಥ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಿದ್ದರು. ತಂಡದಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಕೂಡ ಮೈಗೂಡಿಸಿಕೊಳ್ಳುವಲ್ಲಿ ವಿರಾಟ್ ಪ್ರಮುಖ ಪಾತ್ರ ವಹಿಸಿದ್ದರು.