Virat kohli – ಫೆಬ್ರವರಿ 28, 2012- ಲಂಕಾ ವಿರುದ್ಧ ವಿರಾಟ ದರ್ಶನಕ್ಕೆ ದಶಕದ ಸಂಭ್ರಮ..!

ಅದು ಫೆಬ್ರವರಿ 28, 2012. ಸರಿಯಾಗಿ ಹತ್ತು ವರ್ಷಗಳ ಹಿಂದೆ. ಹೊಬರ್ಟ್ ಅಂಗಣ. ಭಾರತ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ತ್ರಿಕೋನ ಏಕದಿನ ಸಿಬಿ ಸಿರೀಸ್ ಪಂದ್ಯ.
ಶ್ರೀಲಂಕಾ 321 ರನ್ ಗಳ ಸವಾಲನ್ನು ಟೀಮ್ ಇಂಡಿಯಾಗೆ ಒಡ್ಡಿತ್ತು. ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಬೇಕಾದ್ರೆ 40 ಓವರ್ ಗಳಲ್ಲಿ ಗುರಿಮುಟ್ಟಬೇಕಾಗಿತ್ತು. ಆದ್ರೆ ಸೆಹ್ವಾಗ್ 30 ರನ್, ಸಚಿನ್ 39 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದಿದ್ರು. ಆಗ ಟೀಮ್ ಇಂಡಿಯಾದ ಸ್ಕೋರ್ 86 ರನ್ ಗೆ 2 ವಿಕೆಟ್.
ನಂತರ ಗೌತಮ್ ಗಂಭೀರ್ ಅವರನ್ನು ಜೊತೆಯಾಗಿದ್ದು ವಿರಾಟ್ ಕೊಹ್ಲಿ. ಮೂರನೇ ವಿಕೆಟ್ ಗೆ ಗಂಭೀರ್ ಮತ್ತು ಕೊಹ್ಲಿ 115 ರನ್ ದಾಖಲಿಸಿದ್ದರು. ಈ ಹಂತದಲ್ಲಿ ಗಂಭೀರ್ 63 ರನ್ ಗಳಿಸಿ ರನೌಟಾದ್ರು. ಗಂಭೀರ್ ಸಿಟ್ಟಿನಿಂದಲೇ ಪೆವಿಲಿಯನ್ ದಾರಿ ಹಿಡಿದಿದ್ದರು.
ಆಗ ಶುರುವಾಗಿದ್ದು ವಿರಾಟ್ ಕೊಹ್ಲಿಯವರ ವಿರಾಟ ದರ್ಶನ. ಲಂಕಾ ಬೌಲರ್ ಗಳನ್ನು ಧ್ವಂಸ ಮಾಡಿದ್ದ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಅಲ್ಲದೆ ಸುರೇಶ್ ರೈನಾ ಜೊತೆ ನಾಲ್ಕನೇ ವಿಕೆಟ್ ಗೆ ಅಜೇಯ 121 ರನ್ ಕಲೆ ಹಾಕಿ ತಂಡದ ಗೆಲುವಿನ ರೂವಾರಿಯಾದ್ರು. ಸುರೇಶ್ ರೈನಾ ಅಜೇಯ 40 ರನ್ ಗಳಿಸಿದ್ರೆ, ಕೊಹ್ಲಿ ಅಜೇಯ 133 ರನ್ ಸಿಡಿಸಿದ್ರು. Virat Kohli knock: 133* vs Sri Lanka at Hobart

ಅದರಲ್ಲೂ ಮಲಿಂಗಾ ಮತ್ತು ಕುಲಸೇಕರ ಅವರ ಎಸೆತಗಳನ್ನು ವಿರಾಟ್ ಕ್ಯಾರೇ ಮಾಡಲಿಲ್ಲ. ಅದರಲ್ಲೂ 35ನೇ ಓವರ್ ನಲ್ಲಿ ಕೊಹ್ಲಿ 2 ರನ್, ಸಿಕ್ಸರ್, ಬೌಂಡ್ರಿ, ಬೌಂಡ್ರಿ, ಬೌಂಡ್ರಿ, ಬೌಂಡ್ರಿ ಸಿಡಿಸಿದಾಗ ಶ್ರೀಲಂಕಾದ ಫೀಲ್ಡರ್ ಗಳು ದಂಗುಬಡಿದಿದ್ದರು. ಅಂತಿಮವಾಗಿ ಟೀಮ್ ಇಂಡಿಯಾ 36.4 ಓವರ್ ಗಳಲ್ಲಿ ಗೆಲುವಿನ ಸಂಭ್ರಮದಲ್ಲಿ ತೇಲಾಡಿತ್ತು.
ವಿರಾಟ್ ಕೊಹ್ಲಿ, 86 ಎಸೆತಗಳಲ್ಲಿ 16 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 133 ರನ್ ದಾಖಲಿಸಿದ್ರು. ಇದು ವಿರಾಟ್ ಕೊಹ್ಲಿಯವರ ಮಹೋನ್ನತ ಇನಿಂಗ್ಸ್ ಗಳಲ್ಲಿ ಒಂದಾಗಿದೆ.