ಟೆಸ್ಟ್ ಕ್ರಿಕೆಟ್‌ನಲ್ಲಿ 27 ಶತಕ, ಏಕದಿನ ಪಂದ್ಯಗಳಲ್ಲಿ 43 ಶತಕ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಸಿಡಿಸಿರುವ ಶತಕಗಳ ಸಂಖ್ಯೆ 70. ಆದರೆ 70 ಶತಕಗಳನ್ನು ವಿರಾಟ್ ಟಚ್ ಮಾಡಿ 2 ವರ್ಷ 3 ತಿಂಗಳು ಕಳೆದಿದೆ. 71ನೇ ಶತಕ ಇನ್ನೂ ದಕ್ಕಿಲ್ಲ.
2019ರ ನವೆಂಬರ್ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಶತಕ ಬಾರಿಸಿದ್ದರು. ಇದಾದ ಬಳಿಕ ಕೊಹ್ಲಿಯ ಬ್ಯಾಟ್ನಿಂದ ಶತಕ ಸಿಡಿದಿಲ್ಲ. ಮೊಹಾಲಿ ಮೈದಾನದಲ್ಲಿ 100ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಬ್ಯಾಟ್ನಿಂದ ಅಭಿಮಾನಿಗಳು 71ನೇ ಶತಕವನ್ನು ನಿರೀಕ್ಷಿಸುತ್ತಿದ್ದಾರೆ.
ವಿಶೇಷ ಅಂದರೆ ಕೊಹ್ಲಿ 100 ಟೆಸ್ಟ್ ಪಂದ್ಯವಾಡಿದ ವಿಶ್ವದ 71ನೇ ಆಟಗಾರನಾಗಲಿದ್ದಾರೆ. ವಿರಾಟ್ ಕೊಹ್ಲಿ ಶತಕ ಬಾರಿಸದೇ 71ನೇ ಇನಿಂಗ್ಸ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ 71ನೇ ಶತಕಕ್ಕಾಗಿ ಕಾಯುತ್ತಿದ್ದಾರೆ.
ಟೀಮ್ ಇಂಡಿಯಾ ಮಾಜಿ ನಾಯಕ ಕೊಹ್ಲಿ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 138 ರನ್ ಗಳಿಸಬೇಕಾಗಿದೆ. ಏಕೆಂದರೆ ವಿರಾಟ್ ಕೊಹ್ಲಿ ಈ ಸರಣಿಯ ಎಲ್ಲಾ ನಾಲ್ಕು ಇನ್ನಿಂಗ್ಸ್‌ಗಳನ್ನು ಆಡಿದರೆ, ನಾಲ್ಕರಲ್ಲೂ ಔಟಾದರೆ ಮತ್ತು 138 ರನ್‌ಗಳಿಗಿಂತ ಕಡಿಮೆ ಸ್ಕೋರ್ ಮಾಡಿದರೆ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 50 ಕ್ಕಿಂತ ಕೆಳಗಿಳಿಯುತ್ತದೆ.
ವಿರಾಟ್ ಕೊಹ್ಲಿ ಇದುವರೆಗೆ 99 ಟೆಸ್ಟ್‌ಗಳ 168 ಇನ್ನಿಂಗ್ಸ್‌ಗಳಲ್ಲಿ 7962 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 50.39 ಸರಾಸರಿ ಹೊಂದಿದ್ದಾರೆ. ನಾಲ್ಕು ಬಾರಿ ಔಟಾದರೂ ಈ ಸರಣಿಯಲ್ಲಿ ಕೊಹ್ಲಿ 138ಕ್ಕೂ ಹೆಚ್ಚು ರನ್ ಗಳಿಸಿದರೆ ಅವರ ಸರಾಸರಿ 50ಕ್ಕಿಂತ ಹೆಚ್ಚಾಗಿರುತ್ತದೆ.
2017ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧವೇ ಕೊಹ್ಲಿ ಸರಾಸರಿ 50 ರಿಂದ 49.55ಕ್ಕೆ ಕುಸಿದಿರುವುದು ಕಾಕತಾಳೀಯ. ಇದೀಗ ಶ್ರೀಲಂಕಾ ವಿರುದ್ದದ ಪಂದ್ಯವೇ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸರಾಸರಿಯನ್ನು ನಿರ್ಧರಿಸಲಿದೆ.