ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಐತಿಹಾಸಿಕ ಟೆಸ್ಟ್ ಸರಣಿಗೆ ಉಭಯ ತಂಡಗಳು ಸಜ್ಜಾಗಿದ್ದು, ಪಾಕಿಸ್ತಾನ ಅಂಗಳದಲ್ಲಿ ನಡೆಯುತ್ತಿರುವ ಈ ಟೆಸ್ಟ್ ಸರಣಿ ಎರಡೂ ತಂಡಗಳಿಗೂ ವಿಶೇಷವಾಗಿದ್ದರೆ, ಆಸೀಸ್ ಬ್ಯಾಟ್ಸಮನ್ ಉಸ್ಮಾನ್ ಖವಾಜ ಅವರಿಗೆ ಈ ಸರಣಿ ಅತ್ಯಂತ ಸ್ಪೆಷಲ್ ಆಗಿದೆ.
ಆಸೀಸ್ ತಂಡದಲ್ಲಿ ತಮ್ಮ ಶ್ರೇಷ್ಠ ಬ್ಯಾಟಿಂಗ್ನಿಂದ ಮಿಂಚಿರುವ ಉಸ್ಮಾನ್ ಖವಾಜ, ಮೂಲತಃ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಜನಿಸಿದ್ದು, ತಮ್ಮ ನಾಲ್ಕನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಇದೀಗ 24 ವರ್ಷದ ಬಳಿಕ ಪಾಕಿಸ್ತಾನಕ್ಕೆ ಬಂದಿದ್ದು, ಹೀಗಾಗಿ ಪಾಕಿಸ್ತಾನ ಪ್ರವಾಸದ ಬಗ್ಗೆ ಮಾತನಾಡಿರುವ ಖವಾಜ, ತಾನು ಹುಟ್ಟಿದ ದೇಶದಲ್ಲಿ ಆಡುವುದು “ಅತ್ಯಂತ ವಿಶೇಷ” ಎಂದಿದ್ದಾರೆ.
ವರ್ಚುವಲ್ ನ್ಯೂಸ್ ಕಾನ್ಫರೆನ್ಸ್ನಲ್ಲಿ ಮಾತನಾಡಿರುವ ಖವಾಜ, ಪಾಕಿಸ್ತಾನದಲ್ಲಿ ಆಡುತ್ತಿರುವುದು ನನಗೆ ಅತ್ಯಂತ ವಿಶೇಷವಾಗಿದೆ, ಹಾಗಂತ ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ನಾನು ಇಲ್ಲಿ ಆಡಿ ಬೆಳೆದಿದ್ದು, ಖಂಡಿತವಾಗಿ ಭಾವುಕನಾಗಿದ್ದೇನೆ. ಆದರೆ ಒಮ್ಮೆ ಆಟ ಆರಂಭವಾದಾಗ ಇದ್ಯಾವುದರ ಬಗ್ಗೆಯೂ ಆಲೋಚಿಸುವುದಿಲ್ಲ. ಹಲವು ವರ್ಷದ ಬಳಿಕ ತಂಡದಲ್ಲಿ ಆಡುತ್ತಿದ್ದು, ತಂಡದಿಂದ ಹೊರಗುಳಿದಿದ್ದ ನಾನು ಮತ್ತೆ ತಂಡಕ್ಕೆ ಮರಳಿದ್ದೇನೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ನಾನು ಆಡುವ ಪ್ರತಿ ಪಂದ್ಯವೂ ನನಗೆ ಬೋನಸ್ ಇದ್ದಂತೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ನನಗೆ ಯಾವಾಗಲೂ ಹೆಚ್ಚಿನ ಬೆಂಬಲ ದೊರೆತಿದ್ದು, ನನ್ನನ್ನು ಬೆಂಬಲಿಸುತ್ತಾರೆ ಎಂದು ಭಾವಿಸಿದ್ದೇನೆ. ಅಲ್ಲಿನ ಪ್ರೇಕ್ಷಕರು ನಾನು ರನ್ ಗಳಿಸುತ್ತೇನೆ ಎಂದು ಭಾವಿಸುತ್ತಾರೆ, ಜೊತೆಗೆ ಆಸ್ಟ್ರೇಲಿಯಾ ಸೋಲುತ್ತದೆ ಎಂದು ಭಾವಿಸುತ್ತಾರೆ ಎಂದ ಖವಾಜ, ಪಾಕಿಸ್ತಾನದ ಪ್ರೇಕ್ಷಕರು ಕ್ರಿಕೆಟ್ ಅನ್ನು ಪ್ರೀತಿಸಲಿದ್ದು, ಉತ್ತಮ ಆಟಗಾರನನ್ನು ಸಹ ಮೆಚ್ಚುತ್ತಾರೆ ಎಂದು ಭಾವಿಸುವುದಾಗಿ ಹೇಳಿದರು.
ಫಾರ್ಮ್ ಸಮಸ್ಯೆಯಿಂದಾಗಿ ಎಡರು ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದ ಎಡಗೈ ಬ್ಯಾಟ್ಸಮನ್ ಉಸ್ಮಾನ್ ಖವಾಜ, ಇತ್ತೀಚಿಗೆ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ತಂಡಕ್ಕೆ ಮರಳಿದಿದ್ದರು. ಈ ವೇಳೆ ಸಿಡ್ನಿ ಟೆಸ್ಟ್ನಲ್ಲಿ ಎರಡು ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ ಖವಾಜ, ಪಾಕಿಸ್ತಾನ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.