ಅಂಪೈರ್ ಮಾರೈಸ್ ಎರಾಸ್ಮಾಸ್ ಗೆ ಶತಕದ ಸಂಭ್ರಮ…!
ಕ್ರಿಕೆಟ್ ನಲ್ಲಿ ಆಟಗಾರರು ಶತಕ ದಾಖಲಿಸುವುದು ಸಾಮಾನ್ಯ ಸಂಗತಿ. ಆದ್ರೆ ಅಂಪೈರ್ ಗಳು ಶತಕದ ಸಾಧನೆಗೆ ಸೇರುವುದು ಬಹಳಷ್ಟು ಅಪರೂಪ.
ಹೌದು, ವಿಶ್ವ ಕ್ರಿಕೆಟ್ ನಲ್ಲಿ ಅಂಪೈರ್ ಗಳ ಕಾರ್ಯ ಮಹತ್ವವಾದದ್ದು. ಆಟಗಾರರನ್ನು ಮೈದಾನದಲ್ಲಿ ನಿಯಂತ್ರಣದಲ್ಲಿಟ್ಟುಕೊಂಡು ಆಟವನ್ನು ನಡೆಸುವುದು ಅಂದುಕೊಂಡಷ್ಟು ಸುಲಭವಿಲ್ಲ. ಇತ್ತೀಚಿನ ದಿನಗಳಲ್ಲಿ ತಾಂತ್ರಿಕತೆ ಹೆಚ್ಚು ಮಹತ್ವ ಪಡೆದುಕೊಂಡಿದ್ರೂ ಅಂಪೈರ್ ತೀರ್ಮಾನವೇ ಅಂತಿಮವಾಗಿರುತ್ತದೆ. ಹೀಗಾಗಿ ಕ್ರಿಕೆಟ್ ನಲ್ಲಿ ಅಂಪೈರ್ ಗಳ ಕಾರ್ಯವನ್ನು ಸೇವೆ ಅಂತನೇ ಪರಿಗಣಿಸಲಾಗುತ್ತದೆ.
ಇದೀಗ ದಕ್ಷಿಣ ಆಫ್ರಿಕಾದ ಅಂಪೈರ್ ಮಾರೈಸ್ ಎರಾಸ್ಮಾಸ್ ಅವರು ನೂರನೇ ಏಕದಿನ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಸಾಧನೆಗೆ ಪಾತ್ರರಾಗಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಮಾರೈಸ್ ಎರಾಸ್ಮಾಸ್ ಅವರಿಗೆ ಅವಿಸ್ಮರಣೀಯ ಪಂದ್ಯವಾಗಿದೆ.
57ರ ಹರೆಯದ ಮಾರೈಸ್ ಅವರು ನೂರನೇ ಏಕದಿನ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ಪರ ಈ ಸಾಧನೆ ಮಾಡಿರುವ ಮೂರನೇ ಅಂಪೈರ್ ಎಂಬ ಗೌರವಕ್ಕೂ ಪಾತ್ರರಾಗಲಿದ್ದಾರೆ.
ಆಧುನಿಕ ಕ್ರಿಕೆಟ್ ನ ಶ್ರೇಷ್ಠ ಅಂಪೈರ್ ಗಳ ಸಾಲಿಗೆ ಸೇರ್ಪಡೆಗೊಂಡಿರುವ ಮಾರೈಸ್ ಅವರು, 2007ರಲ್ಲಿ ಮೊದಲ ಬಾರಿ ಏಕದಿನ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ನೈರೋಬಿಯಲ್ಲಿ ಕೀನ್ಯಾ ಮತ್ತು ಕೆನಡಾ ನಡುವಿನ ಪಂದ್ಯಕ್ಕೆ ಚೊಚ್ಚಲ ಬಾರಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇನ್ನು ಮಾರೈಸ್ ಅವರು 70 ಟೆಸ್ಟ್, 35 ಟಿ-20 ಪಂದ್ಯ ಹಾಗೂ 18 ಮಹಿಳಾ ಟಿ-20 ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು.
ನಾವು ಕ್ರಿಕೆಟ್ ಆಟದ ಸೇವಕರು. ಆದ್ರೆ ಕೆಲವು ಬಾರಿ ಮಹತ್ವದ ಮೈಲಿಗಲ್ಲು ಸಾಧಿಸಿದಾಗ ನಮ್ಮ ಕೆಲಸವನ್ನು ಗುರುತಿಸುವಂತೆ ಆಗುತ್ತದೆ. ಇದು ನಿಜಕ್ಕೂ ಖುಷಿ ಮತ್ತು ಹೆಮ್ಮೆಯನ್ನುಂಟು ಮಾಡುತ್ತದೆ ಎಂದು ಮಾರೈಸ್ ಅವರು ಹೇಳುತ್ತಾರೆ.
ಅಂಪೈರ್ ಕೆಲಸವನ್ನು ನಾನು ತುಂಬಾನೇ ಇಷ್ಟಪಡುತ್ತೇನೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅಂಪೈರಿಂಗ್ ಮಾಡೋದು ತುಂಬಾನೇ ಸವಾಲಿನ ಕೆಲಸ. ಮುಂದಿನ ಮೂರು ನಾಲ್ಕು ವರ್ಷಗಳ ಕಾಲ ಅಂಪೈರ್ ಆಗಿ ಮುಂದುವರಿಯುವುದಾಗಿ ಹೇಳುತ್ತಾರೆ ಮಾರೈಸ್ .