U-23 World Wrestling C’ship: ಸಜನ್ ಐತಿಹಾಸಿಕ ಸಾಧನೆ
ಸ್ಪೇನ್ ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಕುಸ್ತಿಪಟು ಸಜನ್ ಭನ್ವಾಲಾ ಇತಿಹಾಸ ನಿರ್ಮಿಸಿದ್ದಾರೆ. ಈ ಚಾಂಪಿಯನ್ಶಿಪ್ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಗ್ರೀಕೋ-ರೋಮನ್ ಕುಸ್ತಿಪಟು ಎನಿಸಿಕೊಂಡಿದ್ದಾರೆ.
ಕಂಚಿನ ಪದಕದ ಪ್ಲೇ-ಆಫ್ ಪಂದ್ಯದಲ್ಲಿ ಸಜನ್ ಉಕ್ರೇನ್ನ ಡಿಮಿಟ್ರೋ ವೈಸೊಟ್ಸ್ಕಿಯನ್ನು ಸೋಲಿಸಿದರು. ಉಕ್ರೇನ್ನ ಕುಸ್ತಿಪಟು ವಿರುದ್ಧ ಭರ್ಜರಿ ಆಟ ಪ್ರದರ್ಶಿಸಿದ ಸಜನ್ ಗೆಲುವನ್ನು ದಾಖಲಿಸಿದರು.
ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಕಂಚಿನ ಪದಕದ ಕಾದಾಟದಲ್ಲಿ ಉಭಯ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಅಂಕಗಳನ್ನು ಬಿಟ್ಟು ಕೊಡಲು ಇಬ್ಬರೂ ತಯಾರಿರಲಿಲ್ಲ. ಒಂದು ಬಾರಿ ಉಕ್ರೇನ್ ಆಟಗಾರ ಮುನ್ನಡೆ ಸಾಧಿಸಿದರೆ, ಒಮ್ಮೆ ಭಾರತೀಯ ಕುಸ್ತಿ ಪಟು ಮುನ್ನಡೆ ಸಾಧಿಸಿದರು. ಕೊನೆಯ ಕ್ಷಣದಲ್ಲಿ ಸ್ಥಿರ ಪ್ರದರ್ಶನ ನೀಡಿದ ಸಜನ್ ಅರ್ಹ ಗೆಲುವು ದಾಖಲಿಸಿದರು.
ಇದಕ್ಕೂ ಮುನ್ನ ಭನ್ವಾಲಾ ಅವರು ಲಿಥುವೇನಿಯಾದ ಎಸ್ಟಿಸ್ ಎಲ್ ಅವರನ್ನು 3-0 ಅಂತರದಿAದ ಸೋಲಿಸಿದ್ದರು ಆದರೆ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಮೊಲ್ಡೊವಾದ ಅಲೆಕ್ಸಾಂಡ್ರಿನ್ ಗುಟು ವಿರುದ್ಧ ಸೋತಿದ್ದರು.
ವಿಕಾಸ್ 72ಕೆ.ಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಆಡಲಿದ್ದಾರೆ. ಅವರು ಸೆಮಿಫೈನಲ್ನಲ್ಲಿ ಕ್ರೊಯೇಷಿಯಾದ ಪಾವೆಲ್ ಪುಕ್ಲಾವೆಕ್ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಸೋತರು.
ಸುಮಿತ್ 60 ಕೆಜಿ ವಿಭಾಗದಲ್ಲಿ ಪದಕದ ಆಸೆ ಚಿಗುರಿಸಿದ್ದಾರೆ. ಅವರು ರೆಪೆಚಾಜ್ನಲ್ಲಿ ಕಜಕಿಸ್ತಾನ್ನ ಓಲ್ಜಾಸ್ ಸುಲ್ತಾನ್ ಅವರನ್ನು ಎದುರಿಸಲಿದ್ದಾರೆ. ಆಶು 67 ಕೆಜಿ ವಿಭಾಗದಲ್ಲಿ ಸೋತು ಹೊರಬಿದ್ದಿದ್ದಾರೆ.
U-23 World Wrestling C’ship, Sajan Bhanwala, Greco Roman, Bronze