19 ವಯೋಮಿತಿ ವಿಶ್ವಕಪ್ – ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಕಿರಿಯರ ತಂಡ
19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ನಾಲ್ಕು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಈ ಬಾರಿಯ ಟೂರ್ನಿಯಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅದಕ್ಕೆ ತಕ್ಕಂತೆ ಆಟವನ್ನು ಕೂಡ ಆಡುತ್ತಿದೆ.
ನಾಯಕ ಸೇರಿದಂತೆ ಆರು ಮಂದಿ ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆದ್ರೂ ಎದೆಗುಂದದ ಭಾರತ 19 ವಯೋಮಿತಿ ತಂಡ 174 ರನ್ ಗಳಿಂದ ಐರ್ಲೆಂಡ್ ತಂಡವನ್ನು ಪರಾಭವಗೊಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿತು.
ಭಾರತದ ಪರ ಆರಂಭಿಕರಾದ ಹರ್ನೂರ್ ಸಿಂಗ್ 88 ರನ್ ಹಾಗೂ ಆಂಗ್‍ಕ್ರಿಶ್ ರಘುವಂಶಿ ಅವರು 79 ರನ್ ದಾಖಲಿಸಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ರು. ಮೊದಲ ವಿಕೆಟ್ ಗೆ ಇವರಿಬ್ಬರು 25.4 ಓವರ್ ಗಳಲ್ಲಿ 164 ರನ್ ಕಲೆ ಹಾಕಿದ್ರು. ನಂತರ ರಾಜ್ ಬಾವಾ 42, ನಿಶಾಂತ್ ಸಿಂಧೂ 36 ಹಾಗೂ ರಾಜವರ್ಧನ್ ಅಜೇಯ 39 ರನ್ ಸಿಡಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ರು.
ಗೆಲ್ಲಲು 308 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಐರ್ಲೆಂಡ್ ತಂಡಕ್ಕೆ ಭಾರತ ತಂಡದ ಬೌಲರ್ ಗಳು ಆಘಾತದ ಮೇಲೆ ಆಘಾತ ನೀಡಿದ್ರು. ಗರ್ವ್ ಸಂಗ್ವಾನ್, ಆನೀಶ್ವರ್ ಗೌತಮ್ ಮತ್ತು ಕುಶಾಲ್ ತಂಬೆ ಅವರು ತಲಾ ಎರಡು ವಿಕೆಟ್ ಉರುಳಿಸಿದ್ರು. ಪರಿಣಾಮ ಐರ್ಲೆಂಡ್ ತಂಡ 39 ಓವರ್ ಗಳಲ್ಲಿ 133 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯವಾಗಿ ಸೋಲು ಅನುಭವಿಸಿತು.
101 ಎಸೆತಗಳಲ್ಲಿ ಎಂಟು ಬೌಂಡರಿಗಳ ಸಹಾಯದಿಂದ ಆಕರ್ಷಕ 88 ರನ್ ದಾಖಲಿಸಿದ್ದ ಹರ್ನೂರ್ ಸಿಂಗ್ ಅವರಿಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.