Tom Moody – ಶ್ರೀಲಂಕಾ ಕ್ರಿಕೆಟ್ ನಿರ್ದೇಶಕನ ಸ್ಥಾನದಿಂದ ಕೆಳಗಿಳಿದ ಟಾಮ್ ಮೂಡಿ…!
ಶ್ರೀಲಂಕಾ ಕ್ರಿಕೆಟ್ ನಿರ್ದೇಶಕನ ಸ್ಥಾನದಿಂದ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ ಅವರು ಹೊರಬಂದಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಜೊತೆಗೆ ಪರಸ್ಪರ ಮಾತುಕತೆ ನಡೆಸಿ ಅವಧಿಗೆ ಮುನ್ನವೇ ಟಾಮ್ ಮೂಡಿ ಅವರು ಶ್ರೀಲಂಕಾ ಕ್ರಿಕೆಟ್ ನಿರ್ದೇಶಕನ ಸ್ಥಾನದದಿಂದ ನಿರ್ಗಮಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.
ಟಾಮ್ ಮೂಡಿ ಅವರು ಕಳೆದ ಮಾರ್ಚ್ ನಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದರು.ಇದಕ್ಕು ಮುನ್ನ 2005ರಿಂದ 2007ರವರೆಗೆ ಟಾಮ್ ಮೂಡಿ ಅವರು ಶ್ರೀಲಂಕಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿದ್ದರು. ಟಾಮ್ ಮೂಡಿ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡ 2007ರ ಕೆರೆಬಿಯನ್ ವಿಶ್ವಕಪ್ ನಲ್ಲಿ ರನ್ನರ್ ಆಪ್ ಆಗಿತ್ತು. ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಸೋಲು ಅನುಭವಿಸಿತ್ತು.
ಟಾಮ್ ಮೂಡಿ ಅವರು ತಾಂತ್ರಿಕ ಸಲಹಾ ಸಮಿತಿಗೆ ವರದಿ ಮಾಡಿಕೊಳ್ಳಬೇಕಾಗಿತ್ತು. ಆದ್ರೆ ಈಗ ತಾಂತ್ರಿಕಾ ಸಲಹಾ ಸಮಿತಿಯೇ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಟಾಮ್ ಮೂಡಿ ಅವರ ಸೇವೆ ಅಗತ್ಯವಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿಯು ನಿರ್ಧಾರ ತೆಗೆದುಕೊಂಡಿದೆ.
ಇನ್ನೊಂದೆಡೆ, ಟಾಮ್ ಮೂಡಿ ಅವರು ಒಂದು ತಿಂಗಳ ಹಿಂದೆಯಷ್ಟೇ ಐಪಿಎಲ್ ನ ಸನ್ ರೈಸರ್ಸ್ ಹೈದ್ರಬಾದ್ ತಂಡದ ಹೆಡ್ ಕೋಚ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.