ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದೆ. ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ 6 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ 5 ನ್ನು ಮಾತ್ರ ಆಡಿತ್ತು. ಆದರೆ ಉಳಿದಿರುವ ಒಂದು ಟೆಸ್ಟ್ ಪಂದ್ಯವನ್ನು ಈ ಪ್ರವಾಸದಲ್ಲಿ ಆಡಲಿದೆ. ಟೀಮ್ ಇಂಡಿಯಾ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದ್ದರೂ ಎಡ್ಜ್ಬಾಸ್ಟನ್ ನಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯ ಭಾರತಕ್ಕೆ ಸುಲಭದ ತುತ್ತಲ್ಲ.
ಎಡ್ಜ್ಬಾಸ್ಟನ್ ಟೆಸ್ಟ್ ಗೆಲ್ಲಬೇಕಾದರೆ ಟೀಮ್ಇಂಡಿಯಾ ಸರ್ಕಸ್ ಮಾಡಬೇಕು. ಮೊದಲು ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಬೇಕಿದೆ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ತಂದುಕೊಡಬೇಕಿದೆ. ಕಂ ಬ್ಯಾಕ್ ಮಾಡಿರುವ ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ ಯುವ ಆಟಗಾರ ಹನುಮ ವಿಹಾರಿ ಬ್ಯಾಟ್ ಕೂಡ ಮಿಂಚಬೇಕು. ರಿಷಬ್ ಪಂತ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಕೂಡ ಇಂಗ್ಲೀಷ್ ಪಿಚ್ನಲ್ಲಿ ಬಹಳ ಉಪಯುಕ್ತ.
ಎಡ್ಜ್ಬಾಸ್ಟನ್ ಪಿಚ್ ಸೀಮಿಂಗ್ ವಿಕೆಟ್ ಹೊಂದಿರುತ್ತದೆ. ಇದನ್ನು ನಿಭಾಯಿಸುವುದು ಟೀಮ್ಇಂಡಿಯಾಕ್ಕೆ ಸವಾಲು. ಜೊತೆಗೆ ಈ ಪಿಚ್ನಲ್ಲಿ ಇಂಗ್ಲೆಂಡ್ ದೇಶೀಯ ಟೂರ್ನಿಗಳು ಕೂಡ ನಡೆದಿವೆ. ಇದು ಪಿಚ್ ಪುಡಿಯಾಗುವಂತೆ ಮಾಡಿದೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಿದೆ.
ಬ್ಯಾಟಿಂಗ್ ಮುಗಿದ ಮೇಲೆ ಬೌಲಿಂಗ್ ಸವಾಲು ಕೂಡ ಎದುರಾಗಲಿದೆ. ಕಳೆದ ಬಾರಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಫಾರ್ಮ್ ಕಳಪೆಯಾಗತ್ತು. ಆದರೆ ಈ ಬಾರಿ ಇಂಗ್ಲೆಂಡ್ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಫಾರ್ಮ್ಗೆ ಬಂದಿದೆ. ಹೀಗಾಗಿ ಜಸ್ ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿಗೆ ಆರಂಭದಲ್ಲೇ ಸವಾಲು ಎದುರಾಗಲಿದೆ. ಅಶ್ವಿನ್ ಮತ್ತು ಜಡೇಜಾ ಸ್ಪಿನ್ ನಡೆಯಬೇಕಾದರೆ ವೇಗದ ಬೌಲರ್ಗಳು ಮಿಂಚಲೇ ಬೇಕು. ಒಟ್ಟಿನಲ್ಲಿ ಟೀಮ್ ಇಂಡಿಯಾಕ್ಕೆ ಇಂಗ್ಲೆಂಡ್ ಪ್ರವಾಸ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ.