Team India – ವಿರಾಟ್ ಕೊಹ್ಲಿಗೆ ರಾಹುಲ್ ದ್ರಾವಿಡ್ ಹಿತವಚನ..!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಟೆಸ್ಟಿಂಗ್ ಟೈಮ್ ಆಗಲಿದೆ.
ಕಳೆದ 30 ತಿಂಗಳಿಂದ ಶತಕದ ಬರವನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಈಗಾಗಲೇ ಕ್ರಿಕೆಟ್ ಪಂಡಿತರು ನಾನಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಬಹುಶಃ ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ಬದುಕಿನಲ್ಲಿ ಇಂತಹ ಕೆಟ್ಟ ಪರಿಸ್ಥಿಯನ್ನು ಯಾವತ್ತೂ ಎದುರಿಸಿಲ್ಲ. ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಎದುರಾಳಿ ತಂಡದ ಮೇಲೆ ಮುಗಿಬೀಳುತ್ತಿದ್ದ ವಿರಾಟ್ ಬ್ಯಾಟ್ ಈಗ ಸದ್ದೇ ಮಾಡುತ್ತಿಲ್ಲ.
ವಿರಾಟ್ ಕೊಹ್ಲಿಯವರ ಕಳಪೆ ಫಾರ್ಮ್ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಮತ್ತು ಮಾಜಿ ಕ್ರಿಕೆಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿಯವರ ಬದ್ಧತೆ, ಕಠಿಣ ಅಭ್ಯಾಸ ಮತ್ತು ಫಿಟ್ ನೆಸ್ ಬಗ್ಗೆ ಯಾರು ಕೂಡ ಮಾತನಾಡುವಂಗಿಲ್ಲ. ಅಷ್ಟರ ಮಟ್ಟಿಗೆ ಬದ್ದತೆಯಿಂದಲೇ ಕಠಿಣ ಶ್ರಮವನ್ನು ಅವರು ಮಾಡುತ್ತಿದ್ದಾರೆ.

ಅದೇ ರೀತಿ ಬ್ಯಾಟಿಂಗ್ ತಾಂತ್ರಿಕತೆಯ ಬಗ್ಗೆಯೂ ಸಮಸ್ಯೆ ಇಲ್ಲ. ಆದ್ರೆ ಶಾಟ್ಸ್ ಸೆಲೆಕ್ಷನ್ ನಲ್ಲಿ ಎಡವುತ್ತಿದ್ದಾರೆ ಅಂತ ಅನ್ನಿಸುತ್ತಿದೆ. ಸತತವಾಗಿ ವೈಫಲ್ಯ ಅನುಭವಿಸಿದ್ದಾಗ ಒತ್ತಡಕ್ಕೆ ಸಿಲುಕುವುದು ಸಹಜ. ಆದ್ರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಒತ್ತಡಕ್ಕೆ ಸಿಲುಕಿದಂತೆಯೂ ಕಾಣುತ್ತಿಲ್ಲ. ಹಾಗಾದ್ರೆ ವಿರಾಟ್ ಗೆ ಏನಾಗಿದೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಯಾರಲ್ಲೂ ನಿಖರವಾದ ಉತ್ತರವಿಲ್ಲ.
ಶತಕದ ಮೇಲೆ ಶತಕ ದಾಖಲಿಸುತ್ತಾ , ಹರಿಯುವ ನೀರಿನಂತೆ ರನ್ ಗಳಿಸುತ್ತಿದ್ದ ವಿರಾಟ್ ಈಗ ಮತ್ತೆ ಹಳೆಯ ಲಯವನ್ನು ಕಂಡುಕೊಳ್ಳಬೇಕಿದೆ.
ಈಗಾಗಲೇ ಇಂಗ್ಲೆಂಡ್ ನಲ್ಲಿರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಳಿ ಸಲಹೆ ಮತ್ತು ಮಾರ್ಗದರ್ಶನಗಳನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ವಿರಾಟ್ ಕೊಹ್ಲಿಯವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮ ಕೂಡ ವಿರಾಟ್ ನಡೆಯನ್ನು ಮೆಚ್ಚಿಕೊಂಡಿದ್ದಾರೆ.
ಹೌದು, ವಿರಾಟ್ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಆದ್ರೆ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಳಿ ಸಲಹೆ ಪಡೆದುಕೊಳ್ಳುತ್ತಿರುವುದು ಒಳ್ಳೆಯದ್ದೇ. ಬ್ಯಾಟಿಂಗ್ ತಾಂತ್ರಿಕತೆಯ ಬಗ್ಗೆ ರಾಹುಲ್ ಗಿಂತ ಉತ್ತಮ ಮಾರ್ಗದರ್ಶಕ ಬೇರೆ ಯಾರು ಇಲ್ಲ ಎಂಬ ರೀತಿಯಲ್ಲಿ ರಾಜ್ ಕುಮಾರ್ ಶರ್ಮಾ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಅವರನ್ನು ದಿ ಗ್ರೇಟ್ ವಾಲ್ ಅಂತ ಕರೆಯುತ್ತೇವೆ. ಕಾರಣ ಸ್ವಿಂಗ್ ಎಸೆತಗಳೇ ಆಗಿರಲಿ, ಮಾರಕ ಎಸೆತಗಳೇ ಆಗಿರಲಿ, ಸ್ಪಿನ್ ಎಸೆತಗಳೇ ಆಗಿರಲಿ. ಅದನ್ನು ಯಾವ ರೀತಿ ಆಡಬೇಕು ಎಂಬುದು ರಾಹುಲ್ ದ್ರಾವಿಡ್ ಗೆ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ವಾಲ್ ಅಂತ ಕರೆಯುವುದು. ಹೀಗಾಗಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ವಿರಾಟ್ ಕೊಹ್ಲಿ ತನ್ನ ಬ್ಯಾಟಿಂಗ್ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ ಎಂದು ರಾಜ್ ಕುಮಾರ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ 24ರಿಂದ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ. ಬಳಿಕ ಜುಲೈ 1ರಿಂದ ಟೆಸ್ಟ್ ಪಂದ್ಯ ನಡೆಯಲಿದೆ. ಆದಾದ ನಂತರ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ. Team India – Virat Kohli was working in the nets with Rahul Dravid
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಇಂಗ್ಲೆಂಡ್ ಪ್ರವಾಸ ಹೆಚ್ಚು ಮಹತ್ವದ್ದಾಗಿದೆ. ಅಲ್ಲದೆ ಮುಂಬರುವ ಟಿ-20 ವಿಶ್ವಕಪ್ ಗೆ ಮುನ್ನ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೇ ಇದ್ರೆ ವಿರಾಟ್ ಟಿ-20 ವಿಶ್ವಕಪ್ ನ ಭಾರತ ತಂಡದಿಂದ ಹೊರಗುಳಿದ್ರೂ ಅಚ್ಚರಿ ಏನಿಲ್ಲ..!