Team India – ಡಿಕೆಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೊಟ್ರು ಬೆಲೆ ಕಟ್ಟಲಾಗದ ಗಿಫ್ಟ್..!
ತವರಿನಲ್ಲಿ ಟೀಮ್ ಇಂಡಿಯಾವೇ ಬಲಿಷ್ಠ.. ಅದರಲ್ಲೂ ಟಿ -20 ನಲ್ಲಿ ಸೋಲುವ ಮಾತೇ ಇಲ್ಲ. ಏಷ್ಯಾಕಪ್ ನ ಹೀನಾಯ ಸೋಲಿನ ನಂತರ ರೋಹಿತ್ ಬಳಗ ಮತ್ತೆ ಎಚ್ಚೆತ್ತುಕೊಂಡಿದೆ. ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು 2-1ರಿಂದ ಸರಣಿ ಗೆದ್ದು ಬೀಗಿದೆ ಟೀಮ್ ಇಂಡಿಯಾ.
ಅಂದ ಹಾಗೇ, ಮೊಹಾಲಿಯಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಹೀನಾಯವಾಗಿಯೇ ಸೋತಿತ್ತು. ಅಷ್ಟೇ ಅಲ್ಲ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ತಾಳ್ಮೆಯನ್ನು ಕಳೆದುಕೊಂಡಿದ್ದರು. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ವಿರುದ್ಧ ರೋಹಿತ್ ಶರ್ಮಾ ಸಿಡಿಮಿಡಿಗೊಂಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಕಿರುಚಾಡಿಕೊಂಡು ದಿನೇಶ್ ಕಾರ್ತಿಕ್ ಅವರು ಕೊರಳ ಪಟ್ಟಿಯನ್ನು ಕೂಡ ಹಿಡಿದಿದ್ದರು ರೋಹಿತ್ ಶರ್ಮಾ.
ಆದ್ರೆ ಎರಡನೇ ಪಂದ್ಯದಲ್ಲಿ ಆಗಿದ್ದೇ ಬೇರೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ರೂ ಟೀಮ್ ಇಂಡಿಯಾದ ಗೆಲುವಿಗೆ ಅಡ್ಡಿಯಾಗಲಿಲ್ಲ. ಅದರಲ್ಲೂ ದಿನೇಶ್ ಕಾರ್ತಿಕ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸುವ ಮೂಲಕ ಟೀಮ್ ಇಂಡಿಯಾಗೆ ರೋಚಕ ಗೆಲುವನ್ನು ತಂದುಕೊಟ್ಟರು.
ಅದೇ ರೀತಿ ಮೂರನೇ ಪಂದ್ಯದಲ್ಲೂ ದಿನೇಶ್ ಕಾರ್ತಿಕ್ ಮಿಂಚಿದ್ರು. ಗ್ಲೇನ್ ಮ್ಯಾಕ್ಸ್ ವೆಲ್ ರನೌಟ್ ಆದಾಗ ದಿನೇಶ್ ಕಾರ್ತಿಕ್ ಅವರನ್ನು ನಾಯಕ ರೋಹಿತ್ ಶರ್ಮಾ ಅಭಿನಂದಿಸಿದ್ರು. ಅಲ್ಲದೆ ರೋಹಿತ್ ಅವರು ದಿನೇಶ್ ಕಾರ್ತಿಕ್ ಅವರ ತಲೆಗೆ ಮುತ್ತಿಟ್ಟಿದ್ದರು.
ಇನ್ನು ಸರಣಿ ಗೆದ್ದ ನಂತರ ರೋಹಿತ್ ಶರ್ಮಾ ಅವರು ಟ್ರೋಫಿಯನ್ನು ದಿನೇಶ್ ಕಾರ್ತಿಕ್ ಅವರಿಗೆ ಹಸ್ತಾಂತರಿಸಿದ್ರು. ಸಾಮಾನ್ಯವಾಗಿ ಟೀಮ್ ಇಂಡಿಯಾದಲ್ಲಿ ಸರಣಿ ಗೆದ್ದಾಗ ಯುವ ಆಟಗಾರ ಅಥವಾ ಚೊಚ್ಚಲ ಪಂದ್ಯವನ್ನಾಡಿದ್ದ ಆಟಗಾರನಿಗೆ ಟ್ರೋಫಿಯನ್ನು ಹಸ್ತಾಂತರಿಸುವ ಪರಿಪಾಟವಿದೆ. ಆದ್ರೆ ಈ ಬಾರಿ ರೋಹಿತ್ ಶರ್ಮಾ ಅವರು ಹಿರಿಯ ಆಟಗಾರ ಮತ್ತು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿನೇಶ್ ಕಾರ್ತಿಕ್ ಅವರಿಗೆ ಹಸ್ತಾಂತರಿಸಿದ್ರು.
https://twitter.com/i/status/1574097853877583872
ಒಟ್ಟಿನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಟೀಮ್ ಇಂಡಿಯಾದಲ್ಲಿ ಮಹತ್ವದ ಜವಾಬ್ದಾರಿ ಸಿಕ್ಕಿದೆ. ತಂಡದ ಮ್ಯಾಚ್ ಫಿನಿಶರ್ ಹೊಣೆಯನ್ನು ನಿಭಾಯಿಸಬೇಕಿದೆ. ಆದ್ರೆ ದಿನೇಶ್ ಕಾರ್ತಿಕ್ ಅವರಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ದಿನೇಶ್ ಕಾರ್ತಿಕ್ ಅವರಿಗೆ ಆಡಲು ಸಿಕ್ಕಿದು ಬರಿ ಏಳು ಎಸೆತಗಳು ಮಾತ್ರ. ಹೀಗಾಗಿ ವಿಶ್ವಕಪ್ ಗೆ ಮುನ್ನ ದಿನೇಶ್ ಕಾರ್ತಿಕ್ ಇನ್ನು ಕೆಲವು ಪಂದ್ಯಗಳನ್ನು ಆಡಬೇಕಿದೆ. ಅದು ಅಲ್ಲದೆ, ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವೆ ಪೈಪೋಟಿ ಕೂಡ ನಡೆಯುತ್ತಿದೆ.
ಒಟ್ಟಿನಲ್ಲಿ ಆಸ್ಟ್ರೇಲಿಯಾ ವಿರುದ್ದ ಸರಣಿ ಗೆದ್ದಿರುವ ಟೀಮ್ ಇಂಡಿಯಾದ ಮನೋಬಲ ಹೆಚ್ಚಾಗಿರಬಹುದು. ಆದ್ರೆ ಐಸಿಸಿ ಟಿ-20 ವಿಶ್ವಕಪ್ ನಡೆಯುತ್ತಿರುವುದು ಆಸ್ಟ್ರೇಲಿಯಾ ನೆಲದಲ್ಲಿ ಎಂಬುದನ್ನು ಮರೆಯಬಾರದು.