ಲೋ ಸ್ಕೋರ್ ಗೇಮ್ ಗೆದ್ದ ಟೀಮ್ ಇಂಡಿಯಾ, ಜಯದಲ್ಲಿ ಮಿಂಚಿದ ಸೂರ್ಯ, ಆರ್ಷದೀಪ್
ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆದ್ದು ಜೋಶ್ ನಲ್ಲಿರುವ ಟೀಮ್ ಇಂಡಿಯಾ ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ 8 ವಿಕೆಟ್ ಗಳಿಂದ ಗೆಲುವು ದಾಖಲಿಸಿದೆ. ಲೋ ಸ್ಕೋರ್ ಗೇಮ್ ನಲ್ಲಿ ಸೊಗಸಾದ ಸಂಘಟಿತ ಆಟದ ಪ್ರದರ್ಶನ ನೀಡಿದ ರೋಹಿತ್ ಪಡೆ ಜಯದ ನಗೆ ಬೀರಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ಟೀಮ್ ಇಂಡಿಯಾದ ಯುವ ವೇಗಿಗಳಾದ ಆರ್ಷದೀಪ್ ಸಿಂಗ್ ಹಾಗೂ ದೀಪಕ್ ಚಹಾರ್ ಅವರ ಬಿಗುವಿನ ದಾಳಿಗೆ ಪ್ರವಾಸಿ ತಂಡ ನಲುಗಿತು. ಕೇವಲ 9 ರನ್ ಆಗುವಷ್ಟರಲ್ಲಿ ದಕ್ಷಿಣ ಆಫ್ರಿಕಾದ ಐದು ವಿಕೆಟ್ ಗಳು ಪತನ ಗೊಂಡವು.
ಆರನೇ ವಿಕೆಟ್ ಗೆ ಆಡಂ ಮಾರ್ಕ್ರಮ್ ಹಾಗೂ ವೇಯ್ನ್ ಪಾರ್ನೆಲ್ ಜೋಡಿ ಕೊಂಚ ಚೇತರಿಕೆ ನೀಡಿತು. ಈ ಜೋಡಿ 33 ಎಸೆತಗಳಲ್ಲಿ ಇಷ್ಟೇ ರನ್ ಸೇರಿಸಿತು. ಆಡಂ ಮಾರ್ಕ್ರಮ್ 25 ರನ್ ಬಾರಿಸಿದರು. ಏಳನೇ ವಿಕೆಟ್ ಗೆ ಪಾರ್ನೆಲ್ ಹಾಗೂ ಕೇಶವ್ ಮಹರಾಜ್ ಜೋಡಿ ಸಹ 26 ರನ್ ಕಾಣಿಕೆ ನೀಡಿತು. ಈ ವೇಳೆ 24 ರನ್ ಬಾರಿಸಿದ್ದ ಪಾರ್ನೆಲ್ ಅಕ್ಷರ್ ಗೆ ವಿಕೆಟ್ ಒಪ್ಪಿಸಿದರು.
ಎಂಟನೇ ವಿಕೆಟ್ ಗೆ ಕೇಶವ್ ಹಾಗೂ ಕಗಿಸೊ ರಬಾಡ ಜೋಡಿ 33 ರನ್ ಸೇರಿಸಿತು. ಈ ಜೊತೆಯಾಟದ ಬಹುಪಾಲು ರನ್ ಕೇಶವ್ ಮಹರಾಜ್ ಅವರ ಬ್ಯಾಟ್ ನಿಂದ ಬಂದವು. ಕೇಶವ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 41 ರನ್ ಸಿಡಿಸಿದರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 8 ವಿಕೆಟ್ ಗೆ 106 ರನ್ ಸೇರಿಸಿತು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭವೂ ಕಳಪೆಯಾಗಿತ್ತು. ನಾಯಕ ರೋಹಿತ್ ಶರ್ಮಾ (0) ಹಾಗೂ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (3) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಮೂರನೇ ವಿಕೆಟ್ ಗೆ ಆರಂಭಿಕ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಜೊತೆಗೂಡಿ ಇನ್ನಿಂಗ್ಸ್ ಬೆಳೆಸುವ ಯೋಜನೆ ಹಾಕಿಕೊಂಡಿತು. ಆರಂಭದಲ್ಲಿ ಈ ಜೋಡಿ ಎಚ್ಚರಿಕೆಯ ಆಟವಾಡಿತು. ಅಲ್ಲದೆ ರನ್ ಗಳನ್ನು ಅಳೆದು ತೂಗಿ ಕಲೆ ಹಾಕಿತು. ಪಿಚ್ ಮರ್ಮ ಅರಿತ ಬಳಿಕ ಉಭಯ ಆಟಗಾರರು ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಅಲ್ಲದೆ ಈ ಜೋಡಿ ಮೂರನೇ ವಿಕೆಟ್ ಗೆ ಮುರಿಯದ 93 ರನ್ ಗಳ ಜೊತೆಯಾಟವನ್ನು ನೀಡಿತು.
ಕೆಎಲ್ ರಾಹುಲ್ 56 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 51 ರನ್ ಬಾರಿಸಿದರೆ, ಸೂರ್ಯ 33 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ಇವರ ಅಮೋಘ ಇನ್ನಿಂಗ್ಸ್ ನಲ್ಲಿ 5 ಬೌಂಡರಿ, 3 ಸಿಕ್ಸರ್ ಸೇರಿವೆ. ಭಾರತ 16.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 110 ರನ್ ಸೇರಿಸಿತು.
Team India, South Africa, T-20, KL Rahul, Suryakumar Yadav, Arshdeep Singh