Team india – ಸಾಧಕರ ಸಾಲಿಗೆ ಸೇರಿಕೊಂಡ ಶ್ರೇಯಸ್ ಅಯ್ಯರ್..!

ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಸಿಕ್ಕ ಅವಕಾಶಗಳನ್ನು ಸರಿಯಾಗಿಯೇ ಬಳಸಿಕೊಂಡ ಅಯ್ಯರ್ ಟೀಮ್ ಇಂಡಿಯಾದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೂರು ಪಂದ್ಯಗಳ ಸರಣಿಯಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಶ್ರೇಯಸ್ ಅಯ್ಯರ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಈ ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರು ಸತತ ಮೂರು ಅರ್ಧಶತಕಗಳನ್ನು ದಾಖಲಿಸಿದ್ದರು. ಇದೀಗ ಶ್ರೇಯಸ್ ಅಯ್ಯರ್ ಈ ಸಾಲಿಗೆ ಸೇರಿಕೊಂಡ ನಾಲ್ಕನೇ ಆಟಗಾರನಾಗಿದ್ದಾರೆ. Team india -Shreyas Iyer joins Virat Kohli, Rohit Sharma, k.l. rahul in elite list
ಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 57 ರನ್ ದಾಖಲಿಸಿದ್ರೆ, ಎರಡನೇ ಪಂದ್ಯದಲ್ಲಿ ಅಜೇಯ 74 ರನ್ ಹಾಗೂ ಮೂರನೇ ಪಂದ್ಯದಲ್ಲಿ ಅಜೇಯ 73 ರನ್ ದಾಖಲಿಸಿದ್ರು. ಮೂರು ಪಂದ್ಯಗಳಲ್ಲೂ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಅಯ್ಯರ್ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಈ ಹಿಂದೆ ವಿರಾಟ್ ಕೊಹ್ಲಿ 2012ರಲ್ಲಿ ಈ ಸಾಧನೆ ಮಾಡಿದ್ದರು. ನಂತರ 2014 ಮತ್ತು 2016ರಲ್ಲೂ ಕೊಹ್ಲಿ ಸತತ ಮೂರು ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿದ್ದರು.
ನಂತರ 2018ರಲ್ಲಿ ರೋಹಿತ್ ಶರ್ಮಾ ಮತ್ತು 2020ರಲ್ಲಿ ಕೆ.ಎಲ್. ರಾಹುಲ್ ಈ ಸಾಲಿಗೆ ಸೇರ್ಪಡೆಯಾದ್ರು. ಇದೀಗ 2021ರಲ್ಲಿ ಶ್ರೇಯಸ್ ಅಯ್ಯರ್ ಈ ಸಾಧನೆ ಮಾಡಿದ್ದಾರೆ. ಅಂದ ಹಾಗೇ ಒಂದೇ ಸರಣಿಯಲ್ಲಿ ಈ ಸಾಧನೆ ಮಾಡಿದವರು ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಮಾತ್ರ.