Rishab Pant- ಟೀಮ್ ಇಂಡಿಯಾದ ಟಿ-20 ತಂಡದಲ್ಲಿ ರಿಷಬ್ ಪಂತ್ ಸ್ಥಾನ ಅಲುಗಾಡುತ್ತಿದೆ..!

ಮುಂಬರುವ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಬಗ್ಗೆ ಈಗಾಗಲೇ ಲೆಕ್ಕಚಾರಗಳು ಶುರುವಾಗಿವೆ. ಆಯ್ಕೆ ಸಮಿತಿಗೆ ಬಲಿಷ್ಠ ತಂಡವನ್ನು ಪ್ರಕಟಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
ಹೊಡಿಬಡಿ ಆಟದ ಖದರನ್ನು ಹೊಂದಿರುವ ಸಾಲು ಸಾಲು ಆಟಗಾರರು ಸರದಿಯಲ್ಲಿದ್ದಾರೆ. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಅಷ್ಟೊಂದು ತಲೆನೋವು ಇಲ್ಲ. ಆದ್ರೆ ಬ್ಯಾಟ್ಸ್ ಮೆನ್ ಮತ್ತು ವಿಕೆಟ್ ಕೀಪರ್ ಗಳ ಆಯ್ಕೆಯಲ್ಲಿ ಸಾಕಷ್ಟು ಸ್ಪರ್ಧೆ ಇದೆ. ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ನಂತಹ ತ್ರಿಮೂರ್ತಿಗಳು ತಂಡದಲ್ಲಿ ಇರಲೇಬೇಕು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಹಾಗೂ ಹೆಚ್ಚುವರಿ ಆರಂಭಿಕನಾಗಿ ಇಶಾನ್ ಕಿಶಾನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತ. ಇನ್ನು ಮ್ಯಾಚ್ ಫಿನಿಶರ್ ಆಗಿ ಹಾರ್ದಿಕ್ ಪಾಂಡ್ಯ ಜೊತೆ ದಿನೇಶ್ ಕಾರ್ತಿಕ್ ಇರಲೇಬೇಕು. ಒಂದು ವೇಳೆ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡದೇ ಇದ್ರೆ ಟೀಮ್ ಇಂಡಿಯಾದ ಆಯ್ಕೆ ಸಮಿತಿಗೆ ಮರ್ಯಾದೆನೇ ಇರಲ್ಲ. ಯಾಕಂದ್ರೆ ದಿನೇಶ್ ಕಾರ್ತಿಕ್ ಅಷ್ಟರ ಮಟ್ಟಿಗೆ ತನ್ನ ಸಾಮಥ್ರ್ಯವನ್ನು ಪ್ರದರ್ಶಿಸಿದ್ದಾರೆ.

ಮುಖ್ಯವಾಗಿ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಸ್ಥಾನ ಅಲುಗಾಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ರಿಷಬ್ ಪಂತ್ ತನ್ನ ಬ್ಯಾಟಿಂಗ್ ಅನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಸತತ ಎರಡು ಸೋಲುಗಳ ನಂತರ ಸತತ ಎರಡು ಗೆಲುವು ದಾಖಲಿಸಿಕೊಂಡಿದ್ರೂ ರಿಷಬ್ ಪಂತ್ ಬ್ಯಾಟಿಂಗ್ ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದಾರೆ.
ಹಾಗೇ ನೋಡಿದ್ರೆ ರಿಷಬ್ ಪಂತ್ ಟಿ-20 ಕ್ರಿಕೆಟ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿಲ್ಲ. ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಒಪ್ಪಿಸುವುದು ರಿಷಬ್ ಪಂತ್ ಗೆ ಪರಿಪಾಠವಾಗಿದೆ. team india – Rishab Pant- to think about his batting.
ಈಗಾಗಲೇ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಅವರು ರಿಷಬ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡಿದ್ದಾರೆ. ಟಿ-20 ಕ್ರಿಕೆಟ್ ನಲ್ಲಿ ವೈಡ್ ಎಸೆತಗಳಿಗೆ ಸುಮಾರು 10 ಬಾರಿ ಔಟ್ ಆಗಿದ್ದಾರೆ. ರಿಷಬ್ ಪಂತ್ ಅವರ ವೀಕ್ ನೆಸ್ ಎದುರಾಳಿ ತಂಡಗಳಿಗೆ ಅರ್ಥವಾಗಿಬಿಟ್ಟಿದೆ. ಆದ್ರೆ ರಿಷಬ್ ಪಂತ್ ಮಾತ್ರ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿಲ್ಲ. ಪದೇ ಪದೇ ವೈಡ್ ಎಸೆತಗಳಿಗೆ ಔಟಾಗುತ್ತಿದ್ದಾರೆ. ಇದೇ ರೀತಿ ಮುಂದುವರಿದ್ರೆ ರಿಷಬ್ ಪಂತ್ ಮುಂಬರುವ ಟಿ-20 ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಕೂಡ ಅನುಮಾನವಾಗಿದೆ.
ಇನ್ನೊಂದೆಡೆ ರಿಷಬ್ ಪಂತ್ ಗೆ ಸಾಕಷ್ಟು ಪೈಪೋಟಿ ಕೂಡ ಇದೆ. ಇಶಾನ್ ಕಿಶಾನ್, ದಿನೇಶ್ ಕಾರ್ತಿಕ್ ಮತ್ತು ಕೆ.ಎಲ್. ರಾಹುಲ್ ಕೂಡ ವಿಕೆಟ್ ಕೀಪಿಂಗ್ ಮಾಡುತ್ತಿರುವುದರಿಂದ ರಿಷಬ್ ಪಂತ್ ಸ್ಥಾನ ಟಿ-20 ಕ್ರಿಕೆಟ್ ನಲ್ಲಿ ಭದ್ರವಾಗಿಲ್ಲ.

ಇನ್ನು ರಿಷಬ್ ಪಂತ್ ಅವರ ಸಾಮಥ್ರ್ಯ ಮತ್ತು ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಾಯಿಸುವಂತಹ ರಿಷಬ್ ಪಂತ್ ಚುಟುಕು ಕ್ರಿಕೆಟ್ ನಲ್ಲಿ ಒತ್ತಡಕ್ಕೆ ಸಿಲುಕಿದಂತೆ ಆಡ್ತಾರೆ. ಈ ಬಾರಿಯ ಐಪಿಎಲ್ ನಲ್ಲೂ ರಿಷಬ್ ಪಂತ್ ಬ್ಯಾಟ್ ನಿಂದ ರನ್ ಗಳು ಹರಿದುಬಂದಿಲ್ಲ.
ಇನ್ನೊಂದೆಡೆ ರಿಷಬ್ ಪಂತ್ ಅವರ ಬ್ಯಾಟಿಂಗ್ ಲೋಪದ ಬಗ್ಗೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಸಲಹೆ ಮಾರ್ಗದರ್ಶನಗಳನ್ನು ನೀಡಿದ್ದಾರೆ. ಆದ್ರೆ ಮೈದಾನದಲ್ಲಿ ರಿಷಬ್ ಪಂತ್ ದ್ವಂದ್ವ ಮನಸ್ಸಿನಿಂದ ತನ್ನ ವಿಕೆಟ್ ಗಳನ್ನು ಸುಲಭವಾಗಿ ಕೈಚೆಲ್ಲಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ನಾಯಕತ್ವದ ಒತ್ತಡಗಳನ್ನು ಮರೆತು ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಇಲ್ಲದೇ ಇದ್ರೆ 2022ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪರ ಆಡುವುದು ಕನಸಿನ ಮಾತು ಆಗಲಿದೆ.