Team India – ಕ್ಯಾಪ್ಟನ್ ರಿಷಬ್ ಪಂತ್ ಗೆ ಹೆಡ್ ಕೋಚ್ ದ್ರಾವಿಡ್ ಪಾಠ..!

ಜೂನ್ 18ರಂದು ಸೌರಾಷ್ಟ್ರ ಕ್ರಿಕೆಟ್ ಅಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಾಲ್ಕನೇ ಟಿ-20 ಪಂದ್ಯ ನಡೆಯಲಿದೆ.
ಈಗಾಗಲೇ ಸರಣಿಯಲ್ಲಿ ಟೀಮ್ ಇಂಡಿಯಾ 1-2ರಿಂದ ಹಿನ್ನಡೆಯಲ್ಲಿದೆ. ಮೊದಲ ಎರಡು ಪಂದ್ಯಗಳನ್ನು ಸೋತ ಬಳಿಕ ರಿಷಬ್ ಪಂತ್ ಬಳಗ ಮೂರನೇ ಪಂದ್ಯವನ್ನು ಗೆದ್ದು ಗೆಲುವಿನ ಲಯವನ್ನು ಕಂಡುಕೊಂಡಿದೆ.
ಹೀಗಾಗಿ ನಾಲ್ಕನೇ ಟಿ-20 ಪಂದ್ಯ ಟೀಮ್ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಟಿ-20 ಸರಣಿಯಲ್ಲಿ ಸತತ ಗೆಲುವಿನ ನಾಗಾಲೋಟದಲ್ಲಿರುವ ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಿದೆ.
ಇನ್ನೊಂದೆಡೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಟೀಮ್ ಇಂಡಿಯಾ ಆಟಗಾರರು ನೆಟ್ಸ್ ನಲ್ಲಿ ತಾಲೀಮ್ ನಡೆಸಿದ್ದಾರೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹರ್ಷೆಲ್ ಪಟೇಲ್ ಸೇರಿದಂತೆ ಟೀಮ್ ಇಂಡಿಯಾ ಆಟಗಾರರಿಗೆ ರಾಹುಲ್ ದ್ರಾವಿಡ್ ಪಾಠ ಮಾಡಿದ್ದಾರೆ.
ಅದರಲ್ಲೂ ಟೀಮ್ ಇಂಡಿಯಾ ನಾಯಕ ರಿಷಬ್ ಪಂತ್ ಗೆ ರಾಹುಲ್ ದ್ರಾವಿಡ್ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದಾರೆ. ರಾಹುಲ್ ದ್ರಾವಿಡ್ ಸಲಹೆ, ಮಾರ್ಗದರ್ಶನಗಳನ್ನು ರಿಷಬ್ ಪಂತ್ ಗಂಭೀರವಾಗಿಯೇ ಕೇಳಿಸಿಕೊಂಡಿದ್ದಾರೆ.
ಮುಖ್ಯವಾಗಿ ರಿಷಬ್ ಪಂತ್ ಟಿ-20 ಕ್ರಿಕೆಟ್ ನಲ್ಲಿ ರನ್ ಬರವನ್ನು ಎದುರಿಸುತ್ತಿದ್ದಾರೆ. ಕಳೆದ ಐಪಿಎಲ್ ನಲ್ಲೂ ರಿಷಬ್ ಪಂತ್ ನಿರೀಕ್ಷಿತ ಮಟ್ಟದ ರನ್ ದಾಖಲಿಸಿಲ್ಲ. ಅದೇ ರೀತಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಮೂರು ಪಂದ್ಯಗಳಲ್ಲೂ ರಿಷಬ್ ಪಂತ್ ರನ್ ಬರ ಎದುರಿಸುತ್ತಿದ್ದಾರೆ.
ಇನ್ನೊಂದೆಡೆ ರಿಷಬ್ ಪಂತ್ ಅವರ ಬ್ಯಾಟಿಂಗ್ ಮೇಲೆ ನಾಯಕತ್ವದ ಒತ್ತಡ ಕೂಡ ಪರಿಣಾಮ ಬೀರುತ್ತಿದೆ ಎಂದು ಕೆಲವು ಕ್ರಿಕೆಟ್ ಪಂಡಿಂತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಆದ್ರೆ ರಿಷಬ್ ಪಂತ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ನಾಯಕತ್ವದ ಒತ್ತಡ ಮತ್ತು ಬ್ಯಾಟಿಂಗ್ ವೈಫಲ್ಯಗಳನ್ನು ಸರಿಪಡಿಸಿಕೊಳ್ಳಲು ರಾಹುಲ್ ದ್ರಾವಿಡ್ ಅವರು ಪಂತ್ ಗೆ ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ಹಾಗೇ ನೋಡಿದ್ರೆ ರಿಷಬ್ ಪಂತ್ ಯಾವುದೇ ಒತ್ತಡಕ್ಕೆ ಸಿಲುಕುವುದಿಲ್ಲ. ಫಿಯರ್‍ಲೆಸ್ ಕ್ರಿಕೆಟಿಗ. ಟೆಸ್ಟ್ ಪಂದ್ಯದಲ್ಲೂ ಟಿ-20 ಕ್ರಿಕೆಟ್ ನಂತೆ ಆಡುವ ಕಲೆ ರಿಷಬ್ ಪಂತ್ ಗೆ ಚೆನ್ನಾಗಿ ಗೊತ್ತಿದೆ. ಯಾವುದೇ ಹಂತದಲ್ಲೂ ಪಂದ್ಯದ ಗತಿಯನ್ನು ಬದಲಾಯಿಸುವಂತಹ ಸಾಮಥ್ರ್ಯವನ್ನು ಅವರು ಹೊಂದಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಮಾಡಿರುವ ಸಾಧನೆಗಳು ಎಲ್ಲವೂ ಕಣ್ಣ ಮುಂದೆಯೇ ಇದೆ. Team India -Rahul Dravid Works On Rishab Pant’s Batting
ಆದ್ರೆ ಏಕದಿನ ಮತ್ತು ಟಿ-20 ಕ್ರಿಕೆಟ್ ನಲ್ಲಿ ರಿಷಬ್ ಪಂತ್ ನಿರೀಕ್ಷಿತ ಆಟವನ್ನು ಆಡಿಲ್ಲ. ಅದರಲ್ಲೂ ಟಿ-20 ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಸಾಧನೆ ತೀರಾ ಕೆಳಮಟ್ಟದಲ್ಲಿದೆ.
ಮುಂದಿನ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳ ಪೈಕಿ ರಿಷಬ್ ಪಂತ್ ನಂಬರ್ ವನ್ ಆಯ್ಕೆಯಾಗಿದ್ದಾರೆ. ಆದ್ರೆ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದರಿಂದ ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೋ ಇಲ್ಲವೋ ಅನ್ನೋ ಅನುಮಾನ ಕೂಡ ಕಾಡುತ್ತಿದೆ.
ಯಾಕಂದ್ರೆ, ರಿಷಬ್ ಪಂತ್ ಗೆ ಪೈಪೋಟಿಯಾಗಿ ಇಶಾನ್ ಕಿಶಾನ್, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್ ಕೂಡ ಸರದಿಯಲ್ಲಿದ್ದಾರೆ. ಇನ್ನೊಂದೆಡೆ ಕೆ.ಎಲ್. ರಾಹುಲ್ ಕೂಡ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
ಹೀಗಾಗಿ ಟೀಮ್ ಇಂಡಿಯಾದ ಏಕದಿನ ಮತ್ತು ಟಿ-20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದ್ರೆ, ರಿಷಬ್ ಪಂತ್ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಲೇಬೇಕು. ಹೀಗಾಗಿ ರಿಷಬ್ ಪಂತ್ ನಾಯಕತ್ವದ ಒತ್ತಡವನ್ನು ಮರೆತು ತನ್ನ ನೈಜ ಆಟವನ್ನು ಆಡಲೇಬೇಕು. ನಾಯಕನಾಗಿ ಯಶ ಸಾಧಿಸಿದ್ರೂ ವೈಯಕ್ತಿಕ ಆಟದ ಕಡೆಗೂ ಗಮನ ಹರಿಸಬೇಕು.
ಈ ನಿಟ್ಟಿನಲ್ಲಿ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನಗಳನ್ನು ರಿಷಬ್ ಪಂತ್ ನಾಲ್ಕನೇ ಟಿ-20 ಪಂದ್ಯದಲ್ಲಿ ಯಾವ ರೀತಿ ಮೈಗೂಡಿಸಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.