ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸೋಲು, ಈಗ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗುವ ಒತ್ತಡ ಬೇರೆ. ಬ್ಯಾಟಿಂಗ್ ಅಂದುಕೊಂಡಷ್ಟು ಕ್ಲಿಕ್ ಆಗುತ್ತಿಲ್ಲ. ಬೌಲಿಂಗ್ನಲ್ಲಿ ಶಿಸ್ತು ಮಾಯವಾಗಿದೆ. ಚೇಸ್ ಮಾಡಿದರೂ ಸೋಲು, ಟಾರ್ಗೆಟ್ ಸೆಟ್ ಮಾಡಿದರೂ ಸೋಲು. ಸದ್ಯ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಮೂರನೇ ಏಕದಿನ ಪಂದ್ಯ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಕನಿಷ್ಠ ಮಾನ ಉಳಿಸಿಕೊಳ್ಳಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಖಚಿತ. ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾದಾವರಿಗೆ ಅವಕಾಶವೂ ಸಿಗಬಹುದು.
ಶಿಖರ್ ಧವನ್ ಜೊತೆ ಆರಂಭಿಕನಾಗಿ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿಯಬಹುದು. ನಾಯಕ ಕೆ.ಎಲ್. ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಬಹುದು. ವಿರಾಟ್ ವಿರಾಮ ಪಡೆದು ಸೂರ್ಯ ಕುಮಾರ್ ಯಾದವ್ಗೆ ಅವಕಾಶ ನೀಡಬಹುದು. ಇನ್ನು ಶ್ರೇಯಸ್ ಮತ್ತು ವೆಂಕಟೇಶ್ ಅಯ್ಯರ್ ಇನ್ನೊಂದು ಅವಕಾಶ ಪಡೆಯಬಹುದು. ಬೌಲಿಂಗ್ನಲ್ಲಿ ಭುವನೇಶ್ವರ್ ಬದಲಿಗೆ ಮೊಹಮ್ಮದ್ ಸಿರಾಜ್, ಬುಮ್ರಾಗೆ ವಿರಾಮ ನೀಡಿ ದೀಪಕ್ ಚಹರ್ಗೆ ಅವಕಾಶ ಸಿಕ್ಕರೂ ಸಿಗಬಹುದು. ಶಾರ್ದೂಲ್, ಅಶ್ವಿನ್ ಮತ್ತು ಚಹಲ್ ಸ್ಥಾನ ಬಹುತೇಕ ಖಚಿತ. ಮತ್ತೊಂದು ಕಡೆ ಇಶನ್ ಕಿಶನ್ ಕೂಡ ಅವಕಾಶ ಸಿಗಬಹುದು.
ಇನ್ನು ದಕ್ಷಿಣ ಆಫ್ರಿಕಾ ಒತ್ತಡವಿಲ್ಲದೆ ಆಡಬಹುದು. ಈಗಾಗಲೇ ಸರಣಿ ಗೆದ್ದಿರುವ ಹರಿಣಗಳು ಕ್ಲೀನ್ ಸ್ವೀಪ್ ಕನಸು ಕಾಣುತ್ತಿದ್ದಾರೆ. ಕ್ವಿಂಟನ್ ಡಿಕಾಕ್, ಮಲಾನ್, ಬವುಮಾ, ರಾಸಿ ವಾಂಡರ್ ಡ್ಯುಸನ್ ಈಗಾಗಲೇ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಏಡಿಯನ್ ಮಾರ್ಕ್ ರಾಂ ಮತ್ತು ಡೇವಿಡ್ ಮಿಲ್ಲರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬೌಲಿಂಗ್ನಲ್ಲೂ ಹೆಚ್ಚು ಬದಲಾವಣೆ ಅಸಾಧ್ಯ.
ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಪಿಚ್ ಬ್ಯಾಟ್ಸ್ ಮನ್ಗಳ ನೆಚ್ಚಿನ ತಾಣ. ಹೀಗಾಗಿ ಬೌಲರ್ ಗಳು ಲಯ ತಪ್ಪಿದರೆ ಶಿಕ್ಷೆ ಖಚಿತ.