ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಇಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.
ಮೂರನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ಭಾರತ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 4೦ ದಂಡ ವಿಧಿಸಲಾಗಿದೆ ಎಂದು ಅಂತಾರ್‍ಟ್ರಾಯ ಕ್ರಿಕೆಟ್ ಪರಿಷತ್ (ಐಸಿಸಿ) ಸೋಮವಾರ ಪ್ರಕಟಿಸಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ನಾಯಕತ್ವದ ಭಾರತ ತಂಡ, ನಿಗದಿತ ಅವಧಿಯಲ್ಲಿ ಎರಡು ಓವರ್ ಕಡಿಮೆ ಓವರ್ ಎಸೆದಿದ್ದರಿಂದ ದಂಡ ವಿಧಿಸಲು ಪಂದ್ಯ ರೆಫ್ರಿ ಆಂಡಿ ಪೈಕ್ರಾಫ್ಟ್ ಸೂಚಿಸಿದ್ದರು. ಐಸಿಸಿ ಆಟಗಾರರ ನಿಯಮಾವಳಿ 2.22 ರ ಪ್ರಕಾರ, ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕೆ ಪ್ರತಿ ಆಟಗಾರರಿಗೆ ಪ್ರತಿ ಓವರ್‌ಗೆ ಪಂದ್ಯ ಶುಲ್ಕದ ಶೇ 2೦ ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ಪ್ರಕಟಿಸಿದೆ.
ತಪ್ಪನ್ನು ಭಾರತ ತಂಡದ ನಾಯಕ ಕೆ.ಎಲ್.ರಾಹುಲ್ ಒಪ್ಪಿಕೊಂಡಿದ್ದರಿಂದ ಈ ಕುರಿತು ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಐಸಿಸಿ ತಿಳಿಸಿದೆ. ಭಾನುವಾರ ಕೇಪ್ ಟೌನ್ ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 287 ರನ್ ಮಾಡಿದರೆ, ಉತ್ತರವಾಗಿ ಭಾರತ 283 ರನ್ ಮಾಡಿ ಕೇವಲ ನಾಲ್ಕು ರನ್‌ನಿಂದ ಸೋಲಿನ ಕಹಿ ಅನುಭವಿಸಿತು.