ಟೀಮ್ ಇಂಡಿಯಾದ ಆಲ್ರೌಂಡರ್ ಅಕ್ಷರ್ ಪಟೇಲ್ ಇತ್ತೀಚಿನ ದಿನಗಳಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. 28ನೇ ವರ್ಷಕ್ಕೆ ಕಾಲಿಟ್ಟಿರುವ ಅಕ್ಷರ್ ತನ್ನ ಬರ್ತ್ ಡೇ ದಿನವೇ ಬಹುಕಾಲದ ಗೆಳತಿ ಮೇಹಾ ಅವರಿಗೆ ಪ್ರೊಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿರುವ ಅಕ್ಷರ್ಗೆ ಟೀಮ್ ಇಂಡಿಯಾದ ಹಲವು ಆಟಗಾರರು ಶುಭ ಕೋರಿದ್ದಾರೆ.
ಮೇಹಾ ಅವರಿಗೆ ಮಂಡಿಯೂರಿ ಪ್ರೊಪೋಸ್ ಮಾಡುತ್ತಿರುವ ಫೋಟೋ ಸಾಕಷ್ಟು ಗಮನಸೆಳೆಯುತ್ತಿದೆ. ಇಂದು ನಮ್ಮ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ. ಇಂದಿಗೂ-ಎಂದೆಂದಿಗೂ ಎಂದು ತಮ್ಮ ಇನ್ಸ್ಟಾದಲ್ಲಿ ಅಕ್ಷರ್ ಬರೆದುಕೊಂಡಿದ್ದಾರೆ.
ಎಡಗೈ ಸ್ಪಿನ್ನರ್ ಮತ್ತು ಆಲ್ರೌಂಡರ್ ಆಗಿರುವ ಅಕ್ಷರ್ ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಮಿಂಚು ಹರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲೇ 3 ಪಂದ್ಯಗಳಿಂದ 27 ಕಬಳಿಸಿ ದಾಖಲೆ ಬರೆದಿದ್ದರು. ನ್ಯೂಜಿಲೆಂಡ್ ವಿರುದ್ಧವೂ ಮಿಂಚಿನ ಆಟ ಪ್ರದರ್ಶಿಸಿದ್ದರು. ಗಾಯದ ಕಾರಣದಿಂದಾಗಿ ಅಕ್ಷರ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.