ನಾಯಕ ಕೇನ್ ವಿಲಿಯಂಸನ್(Kane Williamson)(59) ರನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ T20I ತ್ರಿಕೋನ(T20I Tri Series) ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನದ(Pakistan) ವಿರುದ್ಧ ನ್ಯೂಜಿ಼ಲೆಂಡ್(New Zealand) 163 ರನ್ ಕಲೆಹಾಕಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಜಿ಼ಲೆಂಡ್ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ. ಕಿವೀಸ್ ಪರ ಕೇನ್ ವಿಲಿಯಂಸನ್(59) ರನ್‌ಗಳಿಸಿ ತಂಡಕ್ಕೆ ಆಸರೆಯಾದರು.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಫಿನ್ ಅಲೆನ್(12) ಹಾಗೂ ಡ್ವೇನ್ ಕಾನ್ವೆ(14) ನಿರೀಕ್ಷಿತ ಆರಂಭ ನೀಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಂಸನ್(59) ಅತ್ಯಂತ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್(29), ಮಾರ್ಕ್ ಚಾಂಪ್ಮನ್(25) ಹಾಗೂ ಜಿಮ್ಮಿ ನೀಶಮ್(17) ಉಪಯುಕ್ತ ಕಾಣಿಕೆ ನೀಡಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನದ ಪರ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆರಂಭದಲ್ಲೇ ತಂಡಕ್ಕೆ ಮೇಲುಗೈ ತಂದುಕೊಟ್ಟ ಬೌಲರ್‌ಗಳು, ನ್ಯೂಜಿ಼ಲೆಂಡ್ ಬ್ಯಾಟ್ಸ್‌ಮನ್‌ಗಳ ರನ್‌ಗಳಿಕೆ ಓಟಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಮುಖ್ಯವಾಗಿ ನಸೀಮ್ ಶಾ ಹಾಗೂ ಹ್ಯಾರಿಸ್ ರಾಫ್ ತಲಾ 2 ವಿಕೆಟ್ ಪಡೆದರೆ. ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ತಲಾ 1 ವಿಕೆಟ್ ಪಡೆದುಕೊಂಡರು. ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ಫೈನಲ್ ಗೆಲುವಿಗೆ 164 ರನ್‌ಗಳಿಸಬೇಕಿದೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ಪಾಕಿಸ್ತಾನಕ್ಕೆ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಆಜಂ ಪ್ರಮುಖ ಅಸ್ತ್ರವಾಗಿದ್ದಾರೆ.