ಡೆವಾನ್ ಕಾನ್ವೆ(92*) ಹಾಗೂ ಫಿನ್ ಅಲೆನ್(42) ಬ್ಯಾಟಿಂಗ್ ಅಬ್ಬರ ಟಿಮ್ ಸೌಥಿ(6/3) ಹಾಗೂ ಮಿಚೆಲ್ ಸ್ಯಾಂಟ್ನರ್(31/3) ಬೌಲಿಂಗ್ ಚಮತ್ಕಾರದಿಂದ ಆಲ್ರೌಂಡ್ ಪ್ರದರ್ಶನ(All-Round Performance) ನೀಡಿದ ನ್ಯೂಜಿ಼ಲೆಂಡ್(New Zealand) ಸೂಪರ್-12 ಪಂದ್ಯದಲ್ಲಿ ಆಸ್ಟ್ರೇಲಿಯಾ(Australia) ವಿರುದ್ಧ 89 ರನ್‌ಗಳ ಅದ್ಭುತ ಗೆಲುವು ಸಾಧಿಸುವ ಮೂಲಕ T20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ.
ಸಿಡ್ನಿ ಕ್ರಿಕೆಟ್ ಮೈದಾನ(Sydney Cricket Ground)ದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಆಟಗಾರರು ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿ಼ಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 200 ರನ್‌ಗಳಿಸಿತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿ 17.1 ಓವರ್‌ನಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ಅವರದ್ದೇ ನೆಲದಲ್ಲಿ ಮಣಿಸಿದ ಕಿವೀಸ್, 2021ರ ಟಿ20 ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.
ಕಾನ್ವೆ-ಅಲೆನ್ ಅಬ್ಬರ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ನ್ಯೂಜಿ಼ಲೆಂಡ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಫಿನ್ ಅಲೆನ್(42) ಹಾಗೂ ಡೆವಾನ್ ಕಾನ್ವೆ(92*) ಮೊದಲ ವಿಕೆಟ್‌ಗೆ 56 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಸ್ಪೋಟಕ ಆಟವಾಡಿದ ಅಲೆನ್, ಕೇವಲ 16 ಬಾಲ್‌ಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಮೂಲಕ 42 ರನ್‌ಗಳಿಸಿ ಹೊರ ನಡೆದರು. ನಂತರ ಬಿರುಸಿನ ಆಟವಾಡಿದ ಕಾನ್ವೆ, 58 ಬಾಲ್‌ಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 92 ರನ್‌ಗಳಿಸಿದರು. ಉಳಿದಂತೆ ವಿಲಿಯಂಸನ್(23), ಫಿಲಿಪ್ಸ್(12) ಹಾಗೂ ನೀಶಾಮ್ 26*(13) ಉಪಯುಕ್ತ ರನ್ ಕಲೆಹಾಕಿದರು. ಆಸ್ಟ್ರೇಲಿಯಾ ಪರ ಹೆಜಲ್ವುಡ್ 2, ಆಡಂ ಜ್ಹಂಪ 1 ವಿಕೆಟ್ ಪಡೆದರು.
ಆಸೀಸ್ ಬ್ಯಾಟಿಂಗ್ ವೈಫಲ್ಯ:
ನ್ಯೂಜಿ಼ಲೆಂಡ್ ನೀಡಿದ 201 ರನ್‌ಗಳ ಸವಾಲಿನ ಮೊತ್ತ ಚೇಸ್ ಮಾಡಿದ ಆಸ್ಟ್ರೇಲಿಯಾ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಇನ್ನಿಂಗ್ಸ್ ಆರಂಭಿಸಿದ ವಾರ್ನರ್(5) ಹಾಗೂ ಫಿಂಚ್(13) ಬಹುಬೇಗನೆ ನಿರ್ಗಮಿಸಿದರು. ನಂತರ ಬಂದ ಮಿಚೆಲ್ ಮಾರ್ಷ್(16) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(28) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ಇವರಿಬ್ಬರು ಔಟಾದ ಬಳಿಕ ಕಣಕ್ಕಿಳಿದ ಬ್ಯಾಟ್ಸ್‌ಮನ್‌ಗಳು ಸೌಥಿ ಹಾಗೂ ಸ್ಯಾಂಟ್ನರ್ ಬೌಲಿಂಗ್ ದಾಳಿಗೆ ತತ್ತರಿಸಿದರು. ಪರಿಣಾಮ ಕೆಳ ಕ್ರಮಾಂಕದಲ್ಲಿ ಪ್ಯಾಟ್ ಕಮ್ಮಿನ್ಸ್(21) ರನ್‌ಗಳಿಸಿದ್ದು ಬಿಟ್ಟರೆ, ಉಳಿದವರು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.
ಸೌಥಿ-ಸ್ಯಾಂಟ್ನರ್ ಕೈಚಳಕ:
ಆಸೀಸ್ ವಿರುದ್ಧ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಟಿಮ್ ಸೌಥಿ, 2.1 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ. ಮಿಚೆಲ್ ಸ್ಯಾಂಟ್ನರ್ 4 ಓವರ್‌ಗಳಲ್ಲಿ 31 ರನ್‌ಗೆ 3 ವಿಕೆಟ್ ಪಡೆದರು. ಉಳಿದಂತೆ ಟ್ರೆಂಟ್ ಬೋಲ್ಟ್ 2, ಫೆರ್ಗುಸನ್ ಹಾಗೂ ಸೋಧಿ ತಲಾ 1 ವಿಕೆಟ್ ಪಡೆದರು. ಕಿವೀಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಡೆವಾನ್ ಕಾನ್ವೆ(92*) ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.