ಸೌತ್ ಆಫ್ರಿಕಾ(South Africa)ದ ವೇಗದ ಬೌಲರ್ಗಳ ದಾಳಿಗೆ ಟೀಂ ಇಂಡಿಯಾ(Team India)ದ ಬ್ಯಾಟ್ಸ್ಮನ್ಗಳು ತತ್ತರಿಸಿದರು. ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಸೂರ್ಯಕುಮಾರ್ ಯಾದವ್(68) ಅವರ ಜವಾಬ್ದಾರಿಯ ಆಟದಿಂದ ಭಾರತ 133 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ. ಪರ್ತ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಸೌತ್ ಆಫ್ರಿಕಾ ಬೌಲರ್ಗಳ ಆಕ್ರಮಣಕಾರಿ ದಾಳಿಗೆ ನಲುಗಿದ ಭಾರತ, 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ಗಳಿಸಿತು.
ಬ್ಯಾಟ್ಸ್ಮನ್ಗಳ ಪರೇಡ್:
ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ(15) ಹಾಗೂ ಕೆಎಲ್ ರಾಹುಲ್(9) ಜೋಡಿ ಮತ್ತೊಮ್ಮೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ(12) ಉತ್ತಮ ಆಟವಾಡುವ ಭರವಸೆ ಮೂಡಿಸಿ ವಿಕೆಟ್ ಒಪ್ಪಿಸಿದರು. ಇದಾದ ನಂತರದಲ್ಲಿ ಬಂದ ದೀಪಕ್ ಹೂಡ(0), ಹಾರ್ದಿಕ್ ಪಾಂಡ್ಯ(2) ಹಾಗೂ ದಿನೇಶ್ ಕಾರ್ತಿಕ್(6) ಜವಾಬ್ದಾರಿಯ ಆಟವಾಡುವಲ್ಲಿ ಎಡವಿದರು.
ಸೂರ್ಯನ ಮಿಂಚಿನ ಆಟ:
ಸೌತ್ ಆಫ್ರಿಕಾದ ಬೌಲಿಂಗ್ ದಾಳಿಗೆ ನಲುಗಿ 49 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ, ಅಲ್ಪಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿತ್ತು. ಆದರೆ 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಸಂಕಷ್ಟದಲ್ಲಿದ್ದ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಆಫ್ರಿಕನ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಸೂರ್ಯಕುಮಾರ್, 40 ಬಾಲ್ಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 68 ರನ್ಗಳಿಸಿ ಮಿಂಚಿದರು.
ಎನ್ಗಿಡಿ ಮಾರಕ ದಾಳಿ:
ಟಾಸ್ ಸೋತು ಬೌಲಿಂಗ್ ಅವಕಾಶ ಪಡೆದ ಸೌತ್ ಆಫ್ರಿಕಾಕ್ಕೆ ವೇಗದ ಬೌಲರ್ಗಳು ಆಸರೆಯಾದರು. ತಮ್ಮ ಮೊದಲ ಓವರ್ನಿಂದಲೇ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಎನ್ಗಿಡಿ, 4 ಓವರ್ಗಳಲ್ಲಿ 29 ರನ್ಗಳಿಸಿ 4 ಪ್ರಮುಖ ವಿಕೆಟ್ ಪಡೆದು ಭಾರತದ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪರ್ನೆಲ್ 3 ಹಾಗೂ ನೋಕಿಯೇ 1 ವಿಕೆಟ್ ಪಡೆದರು.