T20I CWC 2022 : T20 ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ(Virat Kohli) ಬಾಂಗ್ಲಾದೇಶ(Bangladesh) ವಿರುದ್ಧದ ಸೂಪರ್-12(Super-12) ಪಂದ್ಯದಲ್ಲಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಮೂಲಕ ತಮ್ಮ ಯಶಸ್ಸಿನ ನಾಗಾಲೋಟವನ್ನ ಮುಂದುವರೆಸಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮಿಂಚಿದ ವಿರಾಟ್ ಕೊಹ್ಲಿ, ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ 3ನೇ ಅರ್ಧಶತಕ ಬಾರಿಸಿ ಮಿಂಚಿದರು. ಜವಾಬ್ದಾರಿಯುತ ಆಟವಾಡಿದ ವಿರಾಟ್ ಕೊಹ್ಲಿ 44 ಬಾಲ್‌ಗಳಲ್ಲಿ 64 ರನ್‌ಗಳಿಸಿ ಅಜೇಯರಾಗುಳಿದರು. ಇದರ ಪರಿಣಾಮ ಟೀಂ ಇಂಡಿಯಾ 20 ಓವರ್‌ಗಳಲ್ಲಿ 184/6 ರನ್‌ಗಳ ಅತ್ಯುತ್ತಮ ಮೊತ್ತ ಕಲೆಹಾಕಲು ಕಾರಣವಾದರು.
ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಬ್ಬರದ ಬ್ಯಾಟಿಂಗ್‌ನಿಂದ ಸದ್ದು ಮಾಡಿದ್ದ ಕಿಂಗ್ ಕೊಹ್ಲಿ, ಪಾಕಿಸ್ತಾನದ ವಿರುದ್ಧ ಅಮೋಘ ಆಟದಿಂದ ಅಜೇಯ 82* ರನ್‌ಗಳಿಸಿ ಟೀಮ್ ಇಂಡಿಯಾಕ್ಕೆ ಅವಿಸ್ಮರಣೀಯ ಗೆಲುವನ್ನ ತಂದುಕೊಟ್ಟಿದ್ದರು. ನಂತರ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲೂ ತಮ್ಮ ಅಸಲಿ ಆಟವಾಡಿದ ಚೇಸ್ ಮಾಸ್ಟರ್ ಕೊಹ್ಲಿ, 44 ಬಾಲ್‌ಗಳಲ್ಲಿ 62* ರನ್‌ಗಳಿಸಿ ಮಿಂಚಿದ್ದರು. ಆದರೆ ಸೌತ್ ಆಫ್ರಿಕಾ ವಿರುದ್ಧ ನಡೆದ 3ನೇ ಸೂಪರ್-12 ಪಂದ್ಯದಲ್ಲಿ ಉತ್ತಮ ಆರಂಭ ಪಡೆದರು, ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದ ಕೊಹ್ಲಿ 12 ರನ್‌ಗಳಿಗೆ ಔಟಾಗಿ ಭಾರೀ ನಿರಾಸೆ ಮೂಡಿಸಿದ್ದರು.
ಆದರೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಲಿಷ್ಠ ಕಮ್ ಬ್ಯಾಕ್ ಮಾಡಿದ ವಿರಾಟ್ ಕೊಹ್ಲಿ, ಎಂದಿನಂತೆ ತಮ್ಮ ಅಸಲಿ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದರು. ಕೊನೆಯವರೆಗೂ ಜವಾಬ್ದಾರಿಯಿಂದ ಆಟವಾಡಿದ ಕೊಹ್ಲಿ, ಪ್ರಸಕ್ತ ವಿಶ್ವಕಪ್‌ನಲ್ಲಿ ಮೂರನೇ ಅರ್ಧಶತಕ ಬಾರಿಸಿ ಗಮನ ಸೆಳೆದರು.
ಅಲ್ಲದೇ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 16 ರನ್‌ಗಳಿಸಿದ್ದ ಸಂದರ್ಭದಲ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ರನ್‌ಗಳಿಸಿದ್ದ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೆಲಾ ಜಯವರ್ಧನೆ ಅವರ ದಾಖಲೆ ಹಿಂದಿಕ್ಕಿದರು. ಜಯವರ್ಧನೆ ಅವರು ಟಿ20 ವಿಶ್ವಕಪ್‌ನಲ್ಲಿ 31 ಇನ್ನಿಂಗ್ಸ್‌ನಲ್ಲಿ 1016 ರನ್‌ಗಳಿಸಿದ್ದರೆ, ಕೊಹ್ಲಿ 23 ಇನ್ನಿಂಗ್ಸ್‌ಗಳಲ್ಲಿ 1016 ರನ್‌ಗಳ ಗಡಿದಾಟಿದ್ದಾರೆ.