T20 World Cup ಟೂರ್ನಿಯ Super 12 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ(Pakistan)ದ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಟೀಂ ಇಂಡಿಯಾ(Team India) ತನ್ನ 2ನೇ ಪಂದ್ಯದಲ್ಲಿ ಅ.27ರಂದು ನೆದರ್ಲೆಂಡ್ಸ್ ತಂಡದ ಸವಾಲು ಎದುರಿಸೋಕ್ಕೆ ಸಜ್ಜಾಗಿದೆ.
ಹೈ-ವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿರುವ ರೋಹಿತ್ ಪಡೆ, ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಪಾಕಿಸ್ತಾನದ ವಿರುದ್ಧದ ಮಹತ್ವದ ಫೈಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಕೆಚ್ಚೆದೆಯ ಬ್ಯಾಟಿಂಗ್‌ನಿಂದಾಗಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಇದೀಗ ಸೂಪರ್-12 ಹಂತದ 2ನೇ ಪಂದ್ಯಕ್ಕಾಗಿ ಟೀಂ ಇಂಡಿಯಾದ ಆಟಗಾರರು ಸಂಪೂರ್ಣ ಸಜ್ಜಾಗಿದ್ದಾರೆ.
ನೆದರ್ಲೆಂಡ್ಸ್ ತಂಡದ ಸವಾಲು ಎದುರಿಸೋಕ್ಕೆ ತಯಾರಾಗಿರುವ ಭಾರತ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಮೂಲಕ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಮುಖವಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ ಸ್ವಲ್ಪಮಟ್ಟಿನ ಬಳಲಿದತೆ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಅವರನ್ನ ಇದೇ ಕಾರಣದಿಂದ ನೆದರ್ಲೆಂಡ್ಸ್ ವಿರುದ್ಧ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಅವರ ಜಾಗದಲ್ಲಿ ಆಲ್ರೌಂಡರ್‌ಗಳಾದ ದೀಪಕ್ ಹೂಡ ಅಥವಾ ಅಕ್ಸರ್ ಪಟೇಲ್ ಅವರನ್ನ ಕಣಕ್ಕಿಳಿಸುವ ನಿರೀಕ್ಷೆ ಇದೆ.
ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೂ ಸಹ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿ ನೀಡುವ ನಿರೀಕ್ಷೆ ಇದೆ. ಸೂಪರ್-12ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೆಎಲ್. ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಹೀಗಾಗಿ ನಾಳಿನ ಪಂದ್ಯಕ್ಕೆ ರಾಹುಲ್ ಅವರನ್ನ ಕೈಬಿಟ್ಟು ಅವರ ಸ್ಥಾನದಲ್ಲಿ ರಿಷಬ್ ಪಂತ್ ಅವರನ್ನ ಆಡಿಸುವ ಸಾಧ್ಯತೆ ಇದೆ. ಇದರ ಜೊತೆಗೆ 3ನೇ ಬದಲಾವಣೆ ಎಂಬಂತೆ ಯುಜ್ವೇಂದ್ರ ಚಹಲ್ ಅವರನ್ನ ಕಣಕ್ಕಿಳಿಸುವ ಸಾಧ್ಯತೆಯೂ ಹೆಚ್ಚಿದೆ.