T20I CWC 2022 : ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್(T20 World Cup)ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ನಿರಾಸೆ ಅನುಭವಿಸಿದ ಇಂಗ್ಲೆಂಡ್(England), ಇಂದಿನಿಂದ ಆರಂಭವಾಗಲಿರುವ 2022 T20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ(Afghanistan) ತಂಡದ ಚಾಲೆಂಜ್ ಎದುರಿಸಲು ಸಜ್ಜಾಗಿದೆ. ಆ ಮೂಲಕ ಕ್ರಿಕೆಟ್ ಜನಕರು T20 ವಿಶ್ವಕಪ್ ಪ್ರಶಸ್ತಿಗಾಗಿ ತಮ್ಮ ಬೇಟೆಯನ್ನು ಪ್ರಾರಂಭಿಸಲಿದ್ದಾರೆ.
ಉಭಯ ತಂಡಗಳ ಮುಖಾಮುಖಿಗೆ ಪರ್ತ್‌ನಲ್ಲಿ(Perth Stadium) ವೇದಿಕೆ ಸಿದ್ಧವಾಗಿದೆ. 2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಕಿವೀಸ್ ವಿರುದ್ಧ ಸೋಲನುಭವಿಸಿತ್ತು. ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್, ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಆದರೆ ಇದೀಗ ಹೊಸ ನಾಯಕ ಜೋಸ್ ಬಟ್ಲರ್ ನೇತೃತ್ವದಲ್ಲಿ ಹೊಸ ಉತ್ಸಾಹ, ಹೊಸ ನಿರೀಕ್ಷೆಯೊಂದಿಗೆ ಟಿ20 ವಿಶ್ವಕಪ್ ಅಭಿಯಾನ ಆರಂಭಿಸೋಕ್ಕೆ ತಯಾರಾಗಿದೆ.
ಗಾಯಾಳುಗಳ ಸಮಸ್ಯೆ ನಡುವೆಯೂ ಟಿ20 ವಿಶ್ವಕಪ್ ಆಡಲು ತಯಾರಿ ಮಾಡಿಕೊಂಡಿರುವ ಇಂಗ್ಲೆಂಡ್ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದಿರುವ ಇಂಗ್ಲೆಂಡ್, ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದಲ್ಲಿ 7 ಪಂದ್ಯಗಳ ಸರಣಿಯಲ್ಲಿ 4-3ರಿಂದ ಗೆದ್ದಿತ್ತು. ಆದರೆ ಇಂಗ್ಲೆಂಡ್ 2022ರಲ್ಲಿ ಆಡಿರುವ 21 T20I ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಆದರೆ ಇತ್ತೀಚೆಗೆ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಸ್ಪೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಸಾರಥ್ಯದಲ್ಲಿ ಮುನ್ನಡೆಯಲು ಸಜ್ಜಾಗಿರುವ ಇಂಗ್ಲೆಂಡ್, ಪ್ರಶಸ್ತಿಗಾಗಿ ಸವಾಲು ಹಾಕುವ ಸಾಮರ್ಥ್ಯ ಹೊಂದಿದೆ.
ಮತ್ತೊಂದೆಡೆ, ಅಫ್ಘಾನಿಸ್ತಾನವು ಸೂಪರ್-12 ಹಂತದಲ್ಲಿ ಬಲಿಷ್ಠ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಬ್ಯಾಟಿಂಗ್‌ನಲ್ಲಿ ಸಮತೋಲನ ಕಾಯ್ದುಕೊಂಡಿರುವ ಆಫ್ಘಾನ್ ತಂಡಕ್ಕೆ ಸ್ಪಿನ್ ಬೌಲರ್‌ಗಳೇ ಪ್ರಮುಖ ಶಕ್ತಿಯಾಗಿದ್ದಾರೆ. ಹೀಗಾಗಿ ಎಲ್ಲಾ ಕಣ್ಣುಗಳು ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಮೇಲಿದೆ. ಆಸೀಸ್ ಅಂಗಳದಲ್ಲಿ ಆಂಗ್ಲರ ಆರ್ಭಟಕ್ಕೆ ಕಡಿವಾಣ ಹಾಕಲು ಆಫ್ಘಾನ್ ಸ್ಪಿನರ್‌ಗಳು ರಣತಂತ್ರ ರೂಪಿಸಿಕೊಂಡು ಸಜ್ಜಾಗಿದ್ದಾರೆ.
ಸಂಭಾವ್ಯ ತಂಡಗಳು:
ಇಂಗ್ಲೆಂಡ್: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್, ಕ್ರಿಸ್ ಜಾರ್ಡನ್, ಆದಿಲ್ ರಶೀದ್, ಮಾರ್ಕ್ ವುಡ್.
ಅಫ್ಘಾನಿಸ್ತಾನ:
ರಹಮಾನುಲ್ಲಾ ಗುರ್ಬಾಜ್, ಹಜರತುಲ್ಲಾ ಝಜೈ, ನಜೀಬುಲ್ಲಾ ಝದ್ರಾನ್, ಇಬ್ರಾಹಿಂ ಜದ್ರಾನ್ ಉಸ್ಮಾನ್ ಘನಿ, ಮೊಹಮ್ಮದ್ ನಬಿ(ನಾಯಕ), ಫರೀದ್ ಅಹ್ಮದ್ ಮಲಿಕ್, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ.