T20I CWC 2022 ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ಬ್ಯಾಟ್ಸ್ಮನ್ಗಳು ಅಬ್ಬರದ ಬ್ಯಾಟಿಂಗ್ನಿಂದ ವಿಶ್ವ ಕ್ರಿಕೆಟ್ನ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ(Virat Kohli), ಸೂರ್ಯಕುಮಾರ್ ಯಾದವ್(Surya Kumar Yadav), ಆರನ್ ಫಿಂಚ್(Aaron Finch) ಹಾಗೂ ಗ್ಲೆನ್ ಫಿಲಿಪ್ಸ್(Glenn Phillips) ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಬೌಲರ್ಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಆದರೆ ವಿಶ್ವಕ್ರಿಕೆಟ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಲವು ಸ್ಟಾರ್ ಬ್ಯಾಟ್ಸ್ಮನ್ಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಇಂತಹ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಟೀಂ ಇಂಡಿಯಾದ ಕೆಎಲ್ ರಾಹುಲ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸೌತ್ ಆಫ್ರಿಕಾದ ತೆಂಬಾ ಬವುಮಾ, ಪಾಕಿಸ್ತಾನದ ಬಾಬರ್ ಆಜಂ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕಾಣಿಸಿಕೊಂಡಿದ್ದಾರೆ.
ಭಾರತದ ಆರಂಭಿಕ ಬ್ಯಾಟ್ಸ್ಮನ್ ಕನ್ನಡಿಗ ಕೆಎಲ್ ರಾಹುಲ್, ಪ್ರಸಕ್ತ ವಿಶ್ವಕಪ್ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಸೂಪರ್-12ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಯಾವುದೇ ಕಮಾಲ್ ಮಾಡದ ರಾಹುಲ್, ಎರಡಂಕ್ಕಿಯ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್, ಸಾಕಷ್ಟು ಭರವಸೆ ಮೂಡಿಸಿದ್ದರು. ಆದರೆ ತಮ್ಮ ಈ ಪ್ರದರ್ಶನವನ್ನ ಸೂಪರ್-12ನಲ್ಲಿ ಮುಂದುವರಿಸುವಲ್ಲಿ ರಾಹುಲ್ ಸಂಪೂರ್ಣ ವಿಫಲವಾಗಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಪ್ರಮುಖ ಬ್ಯಾಟ್ಸ್ಮನ್ಗಳ ಲಿಸ್ಟ್ನಲ್ಲಿ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ವಾರ್ನರ್, ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಆಡಿರುವ 4 ಪಂದ್ಯದಲ್ಲಿ ಕೇವಲ 22 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಸೌತ್ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಸಹ ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಆಡಿರುವ ಮೂರು ಪಂದ್ಯದಲ್ಲಿ ಬವುಮಾ, ಕೇವಲ 14 ರನ್ಗಳಿಸಿದ್ದಾರೆ. ನಾಯಕನ ವೈಫಲ್ಯದ ನಡುವೆಯೂ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದ ಬಾಬರ್ ಆಜ಼ಂ ಸಹ ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ದೊಡ್ಡಮಟ್ಟದ ಸದ್ದು ಮಾಡಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಭಾರತದ ವಿರುದ್ಧ ಶೂನ್ಯಕ್ಕೆ ಔಟಾಗಿದ್ದ ಪಾಕ್ ನಾಯಕ ತಂಡದ ಎರಡು ಪಂದ್ಯಗಳಿಂದ ಕೇವಲ 8 ರನ್ಗಳಿಸಿದ್ದಾರೆ.