ಕೊನೆಯ ಬಾಲ್‌ವರೆಗೂ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿದ ಬಾಂಗ್ಲಾದೇಶ(Bangladesh) ಟಿ20 ವಿಶ್ವಕಪ್‌ನ ಸೂಪರ್-12 ಪಂದ್ಯದಲ್ಲಿ ಜಿಂಬಾಬ್ವೆ(Zimbabwe) ವಿರುದ್ಧ 3 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಪಾಕಿಸ್ತಾನ ವಿರುದ್ಧ 1 ರನ್‌ಗಳಿಂದ ಗೆದ್ದುಬೀಗಿದ್ದ ಜಿಂಬಾಬ್ವೆ, 3 ರನ್‌ಗಳ ಸೋಲಿನ ನಿರಾಸೆ ಕಂಡಿತು. ಬ್ರಿಸ್ಬೆನ್(Brisbane)ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್‌ಗಳ ಪೈಪೋಟಿ ಮೊತ್ತ ಕಲೆಹಾಕಿತು. ಟಾರ್ಗೆಟ್ ಚೇಸ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 147 ರನ್‌ಗಳಿಸುವ ಮೂಲಕ 3 ರನ್‌ಗಳ ಸೋಲಿನ ಆಘಾತ ಅನುಭವಿಸಿತು.
ಬಾಂಗ್ಲಾಕ್ಕೆ ಶಾಂಟೊ ಆಸರೆ
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಟಗಾರ ನಜ್ಮುಲ್ ಶಾಂಟೊ(71) ಅರ್ಧಶತಕ ಬಾರಿಸಿ ಆಸರೆಯಾದರು. ತಂಡದ ಪರ ಇನ್ನಿಂಗ್ಸ್ ಆರಂಭಿಕನಾಗಿ ಕಣಕ್ಕಿಳಿದ ಸೌಮ್ಯ ಸರ್ಕಾರ್(0) ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಲಿಟನ್ ದಾಸ್(14) ಕೂಡ ನಿರೀಕ್ಷಿತ ಆಟವಾಡಲಿಲ್ಲ. ಬಳಿಕ ಬಂದ ನಾಯಕ ಶಕೀಬ್ ಅಲ್ ಹಸನ್(23) ಹಾಗೂ ಆಫಿಫ್ ಹೊಸೈನ್(29) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿಯ ಆಟವಾಡಿದ ಶಾಂಟೊ, 55 ಬಾಲ್‌ಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸ್ ನೆರವಿನಿಂದ 71 ರನ್‌ಗಳಿಸಿದರು. ಅಂತಿಮವಾಗಿ ಬಾಂಗ್ಲಾ 7 ವಿಕೆಟ್‌ಗೆ 150 ರನ್‌ಗಳಿಸಿತು. ಜಿಂಬಾಬ್ವೆ ಪರ ನಗರ್ವಾ ಹಾಗೂ ಮುಜ಼ರ್ಬಾನಿ ತಲಾ 2 ವಿಕೆಟ್ ಪಡೆದರು.
ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ:
ಬಾಂಗ್ಲಾದೇಶ ನೀಡಿದ 151 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಜಿಂಬಾಬ್ವೆ ಆರಂಭದಲ್ಲೇ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಟಾಪ್ ಆರ್ಡರ್‌ನಲ್ಲಿ ಕಣಕ್ಕಿಳಿದ ಮದವೇರೆ(4), ನಾಯಕ ಎರ್ವೆನ್(8) ಹಾಗೂ ಶುಮ್ಬಾ(8) ಬಹುಬೇಗನೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದಾದ ಬಳಿಕ ಕಣಕ್ಕಿಳಿದ ತಂಡದ ಸ್ಟಾರ್ ಆಲ್ರೌಂಡರ್ ಸಿಕಂದರ್ ರಾಜಾ಼(0) ಕೂಡ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ್ದು ತಂಡಕ್ಕೆ ದೊಡ್ಡ ಆಘಾತ ನೀಡಿತು.
ವಿಲಿಯಮ್ಸ್ ವ್ಯರ್ಥ ಹೋರಾಟ:
ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಜಿಂಬಾಬ್ವೆ 35 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಜವಾಬ್ದಾರಿಯ ಆಟವಾಡಿದ ಸೆನ್ ವಿಲಿಯಮ್ಸ್, 42 ಬಾಲ್‌ಗಳಲ್ಲಿ 64 ರನ್‌ಗಳ ಉತ್ತಮ ರನ್‌ಗಳಿಸುವ ಮೂಲಕ ತಂಡದ ಗೆಲುವಿನ ಆಸೆ ಜೀವಂತ ಇರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಚೆಕಬ್ವಾ(15) ಹಾಗೂ ರೆಯಾನ್ ಬರ್ಲ್(27*) ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ ಓವರ್‌ನಲ್ಲಿ ಜಿಂಬಾಬ್ವೆ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಆದರೆ ಕೇವಲ 12 ರನ್ ಕಲೆಹಾಕಿದ ಜಿಂಬಾಬ್ವೆ 3 ರನ್‌ಗಳಿಂದ ಸೋಲು ಕಂಡಿತು. ಬಾಂಗ್ಲಾ ಪರ ಟಸ್ಕಿನ್ ಅಹ್ಮದ್ 3, ಹೊಸೈನ್ ಹಾಗೂ ಮುಸ್ತಫಿಜು಼ರ್ ತಲಾ 2 ವಿಕೆಟ್ ಪಡೆದು ಮಿಂಚಿದರು.