ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದಕ್ಕೆ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಸಜ್ಜಾಗಿದೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ, ಎರಡನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ನಾಳೆ ಆಂಗ್ಲರನ್ನು ಬಗ್ಗುಬಡಿದಿದ್ದೇ ಆದರೆ, ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ವಿಶ್ವಕಪ್ ಗೆಲುವಿಗಾಗಿ ಹೋರಾಟ ನಡೆಸಲಿದೆ.
ಟೀಮ್ ಇಂಡಿಯಾಕ್ಕೆ ಮತ್ತೊಂದು ತಲೆನೋವಿನ ವಿಚಾರ ಅಂದರೆ, ವಿಕೆಟ್ ಕೀಪರ್ ಆಯ್ಕೆ. ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು ಇನ್ನೂ ಗೊಂದಲದಲ್ಲಿದೆ. ದಿನೇಶ್ ಕಾರ್ತಿಕ್ ಅನುಭವಿ ಬ್ಯಾಟರ್. ಆದರೆ, WCಯಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ, ಕಳೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ಗೆ ಅವಕಾಶ ನೀಡಲಾಯಿತು. ಅವರು ಗಳಿಸಿದ್ದು ಕೇವಲ 3 ರನ್ ಮಾತ್ರ. ಇದು ನಾಯಕ ಶರ್ಮಾಗೆ ದೊಡ್ಡ ತಲೆನೋವಾಗಿದೆ.
ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಹಾಗೂ ಯುಜ್ವೇಂದ್ರ ಚಹಲ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಯುಜಿಗೆ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿಲ್ಲ. ಅನುಭವಿ ಸ್ಪಿನ್ನರ್ ಅಶ್ವಿನ್ ಇರುವ ಕಾರಣ, ಚಾಹಲ್ ಅವರನ್ನು ಸೈಡ್ ಲೈನ್ ಮಾಡಲಾಗಿದೆ. ಆದರೆ, ಅಂಗ್ಲರ ವಿರುದ್ಧ ಲೆಗ್ ಸ್ಪಿನ್ನರ್ ಚಾಹಲ್, ಈ ಹಿಂದೆ ಉತ್ತಮ ಪ್ರದರ್ಶನ ನೀಡಿರುವ ಕಾರಣ, ಅವರಿಗೆ ಚಾನ್ಸ್ ನೀಡಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸಂಗತಿ ಎಂದರೆ, ನಾಳೆಯ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಿದೆ. ಹವಾಮಾನ ವರದಿ ಪ್ರಕಾರ ನಾಳೆ ಅಡಿಲೇಡ್‌ನಲ್ಲಿ ಮೋಡ ಮುಚ್ಚಿದ ವಾತಾವರಣ ಇರಲಿದೆ. ವೆದರ್ ಡಾಟ್ ಕಾಮ್ ವರದಿಯ ಪ್ರಕಾರ ಮೋಡಗಳ ಪ್ರಮಾಣ ಹೆಚ್ಚಿದ್ದರು ಕೂಡ ಯಾವುದೇ ಮಳೆಯಾಗುವ ಸಾಧ್ಯತೆ ಇಲ್ಲವಾಗಿದೆ. ಟೂರ್ನಿಯಲ್ಲಿ ಈಗಾಗಗಲೇ ಹಲವು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಹೀಗಾಗಿ ಕ್ರಿಕೆಟ್ ಪ್ರಿಯರಲ್ಲಿ ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಎಂಬ ಆತಂಕ ಕಾಡಿದ್ದು ನಿಜ. ತಣ್ಣನೆಯ ಗಾಳಿ ಬೀಸಲಿದ್ದು, ಇದು ಸ್ವಿಂಗ್ ಬೌಲರ್‌ಗಳಿಗೆ ನೆರವಾಗಲಿದೆ. ಮಳೆ ಸಾಧ್ಯತೆ ಇಲ್ಲವಾದ ಕಾರಣ ಸಂಪೂರ್ಣ ಪಂದ್ಯವನ್ನು ಪ್ರೇಕ್ಷಕರು ಎಂಜಾಯ್ ಮಾಡಬಹುದು.
ಭಾರತ ತಂಡದ ಸಂಭಾವ್ಯ XI: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್/ ರಿಷಭ್ ಪಂತ್, ಆರ್ ಅಶ್ವಿನ್, ಅಕ್ಷರ್ ಪಟೇಲ್/ ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.