T20 CWC 2022 ಟೂರ್ನಿಯ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್(England) ಹಾಗೂ ಶ್ರೀಲಂಕಾ(Sri Lanka) ತಂಡಗಳು ಮುಖಾಮುಖಿಯಾಗುತ್ತಿವೆ. ಸೆಮೀಸ್(Semi Finals) ಪ್ರವೇಶದ ಲೆಕ್ಕಾಚಾರದಲ್ಲಿ ಆಂಗ್ಲರ ಪಾಲಿಗೆ ಇದು ʼಮಾಡು ಇಲ್ಲವೇ ಮಡಿʼ ಪಂದ್ಯವಾಗಿದೆ.
ಸಿಡ್ನಿ ಕ್ರಿಕೆಟ್ ಮೈದಾನ(Sydney Cricket Ground) ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸೂಪರ್-12 ಹಂತದಲ್ಲಿ ಎರಡು ತಂಡಗಳು ಏರಿಳಿತದ ಪ್ರದರ್ಶನ ಕಂಡಿದೆ. ಆದರೆ ಲಂಕಾ ಪಡೆ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದರೂ, ಇಂಗ್ಲೆಂಡ್ ವಿರುದ್ಧದ ಈ ಹಣಾಹಣಿ ಪ್ರತಿಷ್ಠೆಯ ಪಂದ್ಯವಾಗಿದೆ. ಆದರೆ ಸೆಮೀಸ್ ರೇಸ್‌ನಲ್ಲಿ ಇನ್ನೂ ಜೀವಂತವಾಗಿರುವ ಇಂಗ್ಲೆಂಡ್, ಇಂದಿನ ಪಂದ್ಯವನ್ನ ಗೆದ್ದು ಸೆಮೀಸ್‌ಗೆ ಎಂಟ್ರಿಕೊಡಲಿದೆ. ಹೀಗಾಗಿ ಎರಡು ತಂಡಗಳ ನಡುವೆ ಪ್ರಬಲ ಹಣಾಹಣಿ ನಡೆಯುವ ನಿರೀಕ್ಷೆಯಿದೆ.
ಮೇಲ್ನೋಟಕ್ಕೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಬಲಿಷ್ಠವಾಗಿ ಕಂಡರೂ, ಲಂಕಾ ಸ್ಪಿನ್ ದಾಳಿಯನ್ನ ಯಾವ ರೀತಿ ಎದುರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸೂಪರ್-12ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಇಂಗ್ಲೆಂಡ್, ನಂತರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ DLS ನಿಯಮದ ಪ್ರಕಾರ 5 ರನ್‌ಗಳಿಂದ ಸೋತು ಆಘಾತ ಕಂಡಿತ್ತು. ನಂತರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದರೆ, ನ್ಯೂಜಿ಼ಲೆಂಡ್ ವಿರುದ್ಧ ಗೆಲುವಿನ ನಗೆಬೀರಿತ್ತು. ಸದ್ಯ 5 ಪಾಯಿಂಟ್ಸ್ ಪಡೆದಿರುವ ಇಂಗ್ಲೆಂಡ್, ರನ್‌ರೇಟ್‌ನಲ್ಲಿ ಉತ್ತಮವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದರೆ ಸುಲಭವಾಗಿ ಸೆಮೀಸ್ ಪ್ರವೇಶಿಸಲಿದೆ.
ಆದರೆ ಲಂಕಾ ತಂಡಕ್ಕೆ ಇಂದಿನ ಪಂದ್ಯವನ್ನ ಗೆದ್ದರೂ ಸೆಮಿಫೈನಲ್ ಸ್ಥಾನ ದೊರೆಯುವುದಿಲ್ಲ. ಸೂಪರ್-12ನಲ್ಲಿ ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಗೆದ್ದಿರುವ ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿ಼ಲೆಂಡ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ 4 ಪಂದ್ಯಗಳಲ್ಲಿ 4 ಪಾಯಿಂಟ್ಸ್ ಪಡೆದಿರುವ ಲಂಕಾ, ಇಂಗ್ಲೆಂಡ್ ವಿರುದ್ಧ ಗೆದ್ದರೂ 6 ಅಂಕದೊಂದಿಗೆ ಗ್ರೂಪ್-1ನಲ್ಲಿ 3ನೇ ಸ್ಥಾನದೊಂದಿಗೆ ಟಿ20 ವಿಶ್ವಕಪ್ ಜರ್ನಿಯನ್ನು ಮುಗಿಸಲಿದೆ. ಹೀಗಾಗಿ ಪ್ರತಿಷ್ಠೆಯ ಪಂದ್ಯವಾಗಿರುವ ಆಂಗ್ಲರ ಕದನದಲ್ಲಿ ಗೆದ್ದು ಟಿ20 ವಿಶ್ವಕಪ್ ಅಭಿಯಾನ ಮುಗಿಸುವ ಲೆಕ್ಕಾಚಾರದಲ್ಲಿ ಶ್ರೀಲಂಕಾ ಕಣಕ್ಕಿಳಿಯುತ್ತಿದೆ.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರನ್, ಡಾವಿಡ್ ಮಲಾನ್, ಕ್ರಿಸ್ ವೋಕ್ಸ್, ಆದಿಲ್ ರಶಿದ್, ಮಾರ್ಕ್ ವುಡ್.
ಶ್ರೀಲಂಕಾ ತಂಡ: ಪತುಮ್ ನಿಸ್ಸಂಕಾ, ಕುಸಲ್ ಮೆಂಡಿಸ್, ಧನಂಜಯ ಡಿಸಿಲ್ವಾ, ಚರಿತ್ ಅಸಲಂಕ, ಬನುಕಾ ರಾಜಪಕ್ಸ, ದಸುನ್ ಶನಕ, ವನಿಂದು ಹಸರಂಗ, ಚಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತ.