T20 CWC 2022 ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್(Surya Kumar Yadav) ಸೂಪರ್-12 ಹಂತದಲ್ಲಿ ನಡೆದ ಪಂದ್ಯಗಳಲ್ಲಿ ಮೈಂಡ್ ಬ್ಲೋಯಿಂಗ್ ಸ್ಟ್ರೈಕ್ ರೇಟ್‌ನಿಂದ ಗಮನ ಸೆಳೆದಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ಭುತ ಫಾರ್ಮ್‌ನಿಂದ ಮಿಂಚುತ್ತಿರುವ ಸೂರ್ಯ, ಭಾರತ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಸೂಪರ್-12ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ʼಸ್ಕೈʼ, 193.96ರ ಸ್ಟ್ರೈಕ್ ರೇಟ್‌ನಿಂದ ಮಿಂಚು ಹರಿಸಿದ್ದಾರೆ. 32ರ ಹರೆಯದ ಬ್ಯಾಟಿಂಗ್ ಸೂಪರ್ ಸ್ಟಾರ್, ಸೂಪರ್-12 ಹಂತದಲ್ಲಿ ಆಡಿರುವ 5 ಪಂದ್ಯಗಳಲ್ಲಿ 75ರ ಸರಾಸರಿಯಲ್ಲಿ 225 ರನ್‌ಗಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ 100ಕ್ಕೂ ಅಧಿಕ ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಸೂರ್ಯಕುಮಾರ್ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ನಂತರದಲ್ಲಿ ಸೌತ್ ಆಫ್ರಿಕಾದ ರೈಲಿ ರೊಸ್ಸೋ(169.87) ಹಾಗೂ ಕಿವೀಸ್ ತಂಡದ ಗ್ಲೆನ್ ಫಿಲಿಪ್ಸ್(163.86) ನಂತರದ ಸ್ಥಾನದಲ್ಲಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್, 44.60 ಬ್ಯಾಟಿಂಗ್ ಸರಾಸರಿ ಹಾಗೂ 186.54ರ ಸ್ಟ್ರೈಕ್ ರೇಟ್‌ನೊಂದಿಗೆ 1026 ರನ್‌ಗಳಿಸಿದ್ದಾರೆ. ಆ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ಸೂಪರ್ ಸ್ಟಾರ್, ವರ್ಷವೊಂದರಲ್ಲಿ 1000ಕ್ಕೂ ಅಧಿಕ ಟಿ20 ರನ್‌ಗಳಿಸಿರುವ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.