T20 CWC 2022 : ಟಿ20 ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದರು, ನಂತರದಲ್ಲಿ ನಡೆದ ಸೂಪರ್-12 ಹಂತದ ಮೂರು ಪಂದ್ಯಗಳಲ್ಲಿ ರನ್ಗಳಿಸಲು ಪರದಾಡುತ್ತಿದ್ದ ಕೆ.ಎಲ್. ರಾಹುಲ್(KL Rahul) ಕಡೆಗೂ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ. ಅಡಿಲೇಡ್ ಓವಲ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಖದರ್ ತೋರಿಸಿದ ಕನ್ನಡಿಗ ರಾಹುಲ್, ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ಇನ್ನಿಂಗ್ಸ್ನ ಮೊದಲ ಎರಡು ಓವರ್ಗಳಲ್ಲಿ ನಿಧಾನಗತಿಯ ಆರಂಭ ತೋರಿದ ರಾಹುಲ್, ನಂತರದಲ್ಲಿ ಬಿರುಸಿನ ಆಟಕ್ಕೆ ಮೊರೆ ಹೋದರು.
ಬಾಂಗ್ಲಾದೇಶ್ ಬೌಲರ್ಗಳ ದಾಳಿಗೆ ಸಮರ್ಥವಾದ ಉತ್ತರ ನೀಡಿದ ಕೆ.ಎಲ್.ರಾಹುಲ್, 32 ಬಾಲ್ಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 50 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಅಲ್ಲದೇ 2ನೇ ವಿಕೆಟ್ಗೆ ವಿರಾಟ್ ಕೊಹ್ಲಿ ಜೊತೆಗೂಡಿ 67 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಇನ್ನಿಂಗ್ಸ್ನೊಂದಿಗೆ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಿದ ರಾಹುಲ್, ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಮೇಲೆ ಇರಿಸಿದ್ದ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸೂಪರ್-12 ಆರಂಭದ ಮೂರು ಪಂದ್ಯಗಳಲ್ಲೂ ಕೆಎಲ್ ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 4 ರನ್ಗಳಿಸಿ ಔಟಾಗಿದ್ದರು. ನಂತರ ನೆದರ್ಲೆಂಡ್ ವಿರುದ್ಧವೂ ಸದ್ದು ಮಾಡದ ರಾಹುಲ್, 9 ರನ್ಗಳಿಸಿ ಪೆವಿಲಿಯನ್ ಸೇರಿದ್ದರು. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಸಹ ಕನ್ನಡಿಗನ ಆರ್ಭಟ ನಡೆಯಲಿಲ್ಲ. 9 ರನ್ಗಳಿಸಿ ಔಟಾಗಿದ್ದ ರಾಹುಲ್ ದೊಡ್ಡ ನಿರಾಸೆ ಮೂಡಿಸಿದ್ದರು. ಸತತ ಮೂರು ಪಂದ್ಯಗಳ ವೈಫಲ್ಯದಿಂದಾಗಿ ರಾಹುಲ್ ಅವರ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.