ಟಿ20 ವಿಶ್ವಕಪ್ನಲ್ಲಿ ಏರಿಳಿದ ಪ್ರದರ್ಶನ ನೀಡುತ್ತಾ ಕಡೆಗೂ ಸೆಮೀಸ್ ಪ್ರವೇಶಿಸಿರುವ ಪಾಕಿಸ್ತಾನ(Pakistan) T20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಸದ್ದಿಲ್ಲದೆ ಅಪರೂಪದ ದಾಖಲೆಯೊಂದನ್ನ ಬರೆದಿದೆ.
ಬಾಬರ್ ಆಜ಼ಂ(Babar Azam) ನೇತೃತ್ವದ ಪಾಕಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈವರೆಗೂ ಯಾವ ತಂಡವು ಮಾಡದ ಸಾಧನೆಯನ್ನ ಮಾಡಿದೆ. ಪಾಕ್ ತಂಡ ಪುರುಷರ ಟಿ20 ವಿಶ್ವಕಪ್ನ ಇತಿಹಾಸದಲ್ಲೇ 6 ಬಾರಿ ಸೆಮೀಸ್ ಪ್ರವೇಶಿಸಿರುವ ಮೊದಲ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಸೂಪರ್-12 ಹಂತದ ಕಡೆಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನ ಮಣಿಸುವ ಮೂಲಕ ಪಾಕಿಸ್ತಾನ ತಂಡ 2022ನೇ ಸಾಲಿನ ಟಿ20 ವಿಶ್ವಕಪ್ನ ಸೆಮೀಸ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ಪಾಕಿಸ್ತಾನ ತಂಡ ವಿಫಲವಾಗಿತ್ತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ 4 ವಿಕೆಟ್ಗಳ ಸೋಲಿನ ಆರಂಭ ಪಡೆದಿತ್ತು. ನಂತರದಲ್ಲಿ ಜಿಂಬಾಬ್ವೆ ವಿರುದ್ಧ 1 ರನ್ಗಳ ಹೀನಾಯ ಸೋಲು ಕಂಡ ಬಾಬರ್ ಆಜ಼ಂ ಪಡೆ, ಸೆಮಿಫೈನಲ್ ಪ್ರವೇಶಿಸುವ ಭರವಸೆಯನ್ನೇ ಕಳೆದುಕೊಂಡಿತ್ತು. ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದ ಪಾಕ್ ತಂಡ ನಂತರದಲ್ಲಿ ನೆದರ್ಲೆಂಡ್ಸ್, ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಈ ಹಂತದಲ್ಲಿ ಸೌತ್ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಅಚ್ಚರಿಯ ಸೋಲನುಭವಿಸಿ ಸೆಮೀಸ್ ರೇಸ್ನಿಂದ ಹೊರಬಿದ್ದರೆ, ಪಾಕ್ ತಂಡ ಸೆಮೀಸ್ಗೆ ಎಂಟ್ರಿಕೊಟ್ಟಿತು. ಇದೀಗ ಸರಣಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ತಂಡವನ್ನ ಎದುರಿಸಲು ಸಜ್ಜಾಗಿರುವ ಪಾಕಿಸ್ತಾನ, 1992ರ ಇತಿಹಾಸವನ್ನ ಮರುಕಳಿಸುವ ಲೆಕ್ಕಾಚಾರದಲ್ಲಿದೆ.