ಆರಂಭಿಕರಾದ ಮೊಹಮ್ಮದ್ ರಿಜ್ವಾನ್(Mohammad Rizwan)(57) ಹಾಗೂ ನಾಯಕ ಬಾಬರ್ ಆಜ಼ಂ(Babar Azam)(53) ಅವರ ಶತಕದ ಜೊತೆಯಾಟದ ಮೂಲಕ ನ್ಯೂಜಿ಼ಲೆಂಡ್ ವಿರುದ್ಧದ ಸೆಮೀಸ್ ಕದನದಲ್ಲಿ ಅದ್ಭುತ ಗೆಲುವು ಸಾಧಿಸಿದ ಪಾಕಿಸ್ತಾನ(Pakistan) ಟಿ20 ವಿಶ್ವಕಪ್ ಟೂರ್ನಿಯ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿ಼ಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್‌ಗಳಿಸಿತು. ಕಿವೀಸ್ ತಂಡದ ಪೈಪೋಟಿಯ ಸವಾಲು ಬೆನ್ನತ್ತಿದ ಪಾಕಿಸ್ತಾನ ಆರಂಭಿಕರಿಂದ ದೊರೆತ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್‌ಗಳಿಸುವ ಮೂಲಕ 7 ವಿಕೆಟ್‌ಗಳ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ ಫೈನಲ್‌ಗೆ ಲಗ್ಗೆಯಿಟ್ಟಿತು.
ಮಿಚೆಲ್-ವಿಲಿಯಂಸನ್ ಆಸರೆ:
ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿ಼ಲೆಂಡ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಫಿನ್ ಅಲೆನ್(4) ವಿಕೆಟ್ ಕಳೆದುಕೊಂಡಿತು. ನಂತರದಲ್ಲಿ ಜೊತೆಯಾದ ಡೆವಾನ್ ಕಾನ್ವೆ(21) ಹಾಗೂ ಕೇನ್ ವಿಲಿಯಂಸನ್(46) ಉತ್ತಮ ಬ್ಯಾಟಿಂಗ್‌ನಿಂದ ತಂಡಕ್ಕೆ ಚೇತರಿಕೆ ನೀಡಿದರು. ಈ ಹಂತದಲ್ಲಿ ಕಣಕ್ಕಿಳಿದ ಗ್ಲೆನ್ ಫಿಲಿಪ್ಸ್(6) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಡೆರಿಲ್ ಮಿಚೆಲ್(53*) ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ನ್ಯೂಜಿ಼ಲೆಂಡ್ 20 ಓವರ್‌ಗಳಲ್ಲಿ 154 ರನ್‌ಗಳಿಸಿತು. ಪಾಕಿಸ್ತಾನದ ಪರ ಶಾಹೀನ್ ಅಫ್ರಿದಿ 2, ನವಾಜ್ 1 ವಿಕೆಟ್ ಪಡೆದರು.
ಆಜ಼ಂ-ರಿಜ್ವಾನ್ ಭರ್ಜರಿ ಆಟ:
ನ್ಯೂಜಿ಼ಲೆಂಡ್ ನೀಡಿದ 153 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕರಾದ ಮೊಹಮ್ಮದ್ ರಿಜ್ವಾನ್(57) ಹಾಗೂ ನಾಯಕ ಬಾಬರ್ ಆಜ಼ಂ(53) ಭರ್ಜರಿ ಬ್ಯಾಟಿಂಗ್‌ನಿಂದ ಸದ್ದು ಮಾಡಿದರು. ಮೊದಲ ವಿಕೆಟ್‌ಗೆ 105 ರನ್‌ಗಳ ಶತಕದ ಜೊತೆಯಾಟದಿಂದ ಮಿಂಚಿದ ಈ ಜೋಡಿ ತಂಡದ ಗೆಲುವಿನ ದಾರಿಯನ್ನ ಸುಲಭಗೊಳಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪತನದ ನಂತರ ಬಂದ ಮೊಹಮ್ಮದ್ ಹ್ಯಾರಿಸ್(30) ಹಾಗೂ ಶಾನ್ ಮಸೂದ್(2*) ಜವಾಬ್ದಾರಿಯ ಆಟದಿಂದ ತಂಡವನ್ನ ಗೆಲುವಿನ ದಡಸೇರಿಸಿದರು. ಕಿವೀಸ್ ಪರ ಟ್ರೆಂಟ್ ಬೋಲ್ಟ್ 2 ವಿಕೆಟ್ ಪಡೆದುಕೊಂಡರು.