T20 CWC 2022 ಏಳು-ಬೀಳಿನ ಆಟ ಮುಂದುವರಿದಿದ್ದು, ಟೂರ್ನಿಯಲ್ಲಿ ಸೋಲನ್ನೇ ಕಾಣದೆ ಮುನ್ನುಗ್ಗುತ್ತಿದ್ದ ಸೌತ್ ಆಫ್ರಿಕಾ(South Africa) ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತೋರಿದ ನೀರಸ ಪ್ರದರ್ಶನದಿಂದ ಪಾಕಿಸ್ತಾನ(Pakistan) ವಿರುದ್ಧ ಸೋಲಿನ ಆಘಾತ ಕಂಡಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಸೂಪರ್-12 ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಸ್ಟ್ರಾಂಗ್ ಕಮ್‌ಬ್ಯಾಕ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 185 ರನ್‌ಗಳ ಅದ್ಭುತ ಮೊತ್ತ ಕಲೆಹಾಕಿತು. ಟಾರ್ಗೆಟ್ ಚೇಸ್ ಮಾಡಿದ ಸೌತ್ ಆಫ್ರಿಕಾ, ಡಕ್ ವರ್ತ್ ಲೂಯಿಸ್ ನಿಯಮದನ್ವಯ 14 ಓವರ್‌ಗಳಲ್ಲಿ 108 ರನ್‌ಗಳಿಸಿ 33 ರನ್‌ಗಳ ಸೋಲೊಪ್ಪಿಕೊಂಡಿತು.
ಇಫ್ತಿಕಾರ್-ಶದಾಬ್ ಮಿಂಚು:
ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯ ಕಂಡಿತು. ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಜ್ವಾನ್(4), ಬಾಬರ್(6), ಹ್ಯಾರಿಸ್(28) ಹಾಗೂ ಮಸೂದ್(2) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಪರಿಣಾಮ 43 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಬಂದ ಇಫ್ತಿಕಾರ್ ಅಹ್ಮೆದ್, 35 ಬಾಲ್‌ಗಳಲ್ಲಿ 3 ಬೌಂಡರಿ, 2 ಸಿಕ್ಸ್ ಮೂಲಕ 51 ರನ್‌ಗಳಿಸಿದರು. ಶದಾಬ್ ಖಾನ್, 22 ಬಾಲ್‌ಗಳಲ್ಲಿ 3 ಬೌಂಡರಿ, 4 ಸಿಕ್ಸ್ ಮೂಲಕ 52 ರನ್‌ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಗೆ ಸಾಥ್ ನೀಡಿದ ನವಾಜ್(22) ರನ್‌ಗಳ ಉಪಯುಕ್ತ ರನ್ ಕಲೆಹಾಕಿದರು. ಸೌತ್ ಆಫ್ರಿಕಾ ಪರ ಅನ್ರಿಕ್ ನೋಕಿಯೇ 41 ರನ್ ನೀಡಿ 4 ವಿಕೆಟ್ ಪಡೆದರು.
ಆಫ್ರಿಕನ್ನರ ಬ್ಯಾಟಿಂಗ್ ವೈಫಲ್ಯ:
ಪಾಕಿಸ್ತಾನ ನೀಡಿದ 186 ರನ್‌ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ ಕಂಡಿತು. ನಾಯಕ ತೆಂಬಾ ಬವುಮಾ(36) ಹಾಗೂ ಮಾರ್ಕ್ರಂ(20) ರನ್‌ಗಳಿಸಿದ್ದು ಬಿಟ್ಟರೆ ಉಳಿದ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. 66 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಸೌತ್ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಸುರಿದ ಮಳೆಯಿಂದಾಗಿ DLS ನಿಯಮದ ಪ್ರಕಾರ 14 ಓವರ್‌ಗಳಲ್ಲಿ 142 ರನ್‌ಗಳ ಗುರಿ ನೀಡಲಾಯಿತು. ಆದರೆ ಅಂತಿಮವಾಗಿ ಸೌತ್ ಆಫ್ರಿಕಾ 14 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನದ ಪರ ಶಹೀನ್ ಅಫ್ರಿದಿ 3 ವಿಕೆಟ್ ಪಡೆದರೆ, ಶದಾಬ್ ಖಾನ್ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು.
ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡದ ಸೆಮಿಫೈನಲ್ ಕನಸು ಇನ್ನೂ ಜೀವಂತವಾಗಿದ್ದು, ಸೌತ್ ಆಫ್ರಿಕಾ ಕೂಡ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಸೌತ್ ಆಫ್ರಿಕಾ ತನ್ನ ಮುಂದಿನ ಪಂದ್ಯದಲ್ಲಿ ನ.6ರಂದು ನೆದರ್ಲೆಂಡ್ಸ್ ತಂಡವನ್ನ ಎದುರಿಸಿದರೆ. ಅದೇ ದಿನದಂದು ಪಾಕಿಸ್ತಾನ ತಂಡ ಬಾಂಗ್ಲಾದೇಶ ತಂಡವನ್ನ ಎದುರಿಸಲಿದೆ.