T20 CWC 2022: ನಾಯಕ ಕೇನ್ ವಿಲಿಯಂಸನ್(61) ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಐರ್ಲೆಂಡ್ ವಿರುದ್ಧ 35 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ನ್ಯೂಜಿ಼ಲೆಂಡ್ 2022ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಸ್ಥಾನವನ್ನ ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿ಼ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್‌ಗಳ ಅದ್ಭುತ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್‌ಗಳಿಸುವ ಮೂಲಕ 35 ರನ್‌ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಸೂಪರ್-12 ಹಂತದ ಕಡೆಯ ಲೀಗ್ ಪಂದ್ಯದಲ್ಲಿ ಗೆದ್ದುಬೀಗಿದ ನ್ಯೂಜಿ಼ಲೆಂಡ್ ತನ್ನ ಮೂರನೇ ಗೆಲುವಿನೊಂದಿಗೆ 7 ಅಂಕಗಳಿಸಿದ್ದು, ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.
ವಿಲಿಯಂಸನ್ ಅರ್ಧಶತಕ:
ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿ಼ಲೆಂಡ್‌ಗೆ ಆರಂಭಿಕರಾದ ಫಿನ್ ಅಲೆನ್(32) ಹಾಗೂ ಡೆವಾನ್ ಕಾನ್ವೆ(28) ಮೊದಲ ವಿಕೆಟ್‌ಗೆ 52 ರನ್‌ಗಳ ಆರಂಭ ಒದಗಿಸಿದರು. ನಂತರ ಬಂದ ನಾಯಕ ನಾಯಕ ಕೇನ್ ವಿಲಿಯಂಸನ್, 35 ಬಾಲ್‌ಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸ್ ಮೂಲಕ 61 ರನ್‌ಗಳಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್(17) ಹಾಗೂ ಡೆರೆಲ್ ಮಿಚೆಲ್(31*) ರನ್ ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾದರು. ಕೆಳ ಕ್ರಮಾಂಕದಲ್ಲಿ ಬಂದ ನೀಶಾಮ್(0) ಹಾಗೂ ಸ್ಯಾಂಟ್ನರ್(0) ಮೊದಲ ಬಾಲ್‌ನಲ್ಲೇ ಔಟಾಗಿ ನಿರಾಸೆ ಮೂಡಿಸಿದರು. ಅಂತಿಮವಾಗಿ ನ್ಯೂಜಿ಼ಲೆಂಡ್ 185/6 ರನ್‌ಗಳಿಸಿತು. ಐರ್ಲೆಂಡ್ ಪರ ಜೊಶುವಾ ಲಿಟಿಲ್ 3, ಡೆಲಾನಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಕಿವೀಸ್ ಸಂಘಟಿತ ದಾಳಿ:
ನ್ಯೂಜಿ಼ಲೆಂಡ್ ನೀಡಿದ 186 ರನ್‌ಗಳ ಪೈಪೋಟಿಯ ಮೊತ್ತವನ್ನ ಚೇಸ್ ಮಾಡಿದ ಐರ್ಲೆಂಡ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಪೌಲ್ ಸ್ಟಿರ್ಲಿಂಗ್(37) ಹಾಗೂ ನಾಯಕ ಬಾಲ್ಬರ್ನಿ(30) ಮೊದಲ ವಿಕೆಟ್‌ಗೆ 68 ರನ್‌ಗಳ ಅಡಿಪಾಯ ಹಾಕಿಕೊಟ್ಟರು. ಆದರೆ ಇವರಿಬ್ಬರ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ಟಕ್ಕರ್(13), ಟೆಕ್ಟರ್(2), ಡೆಲಾನಿ(10) ಹಾಗೂ ಡಾಕ್ರೆಲ್(23) ಜವಾಬ್ದಾರಿಯ ಆಟವಾಡಲಿಲ್ಲ. ಇದರ ಪರಿಣಾಮ ಐರ್ಲೆಂಡ್ 20 ಓವರ್‌ಗಳಲ್ಲಿ 150/9 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು. ಕಿವೀಸ್ ಪರ ಫೆರ್ಗುಸನ್ 3 ವಿಕೆಟ್ ಪಡೆದರೆ, ಸೌಥಿ, ಸ್ಯಾಂಟ್ನರ್ ಹಾಗೂ ಸೋಧಿ ತಲಾ 2 ವಿಕೆಟ್ ಪಡೆದರು.
ಉತ್ತಮ ಬ್ಯಾಟಿಂಗ್‌ನಿಂದ ತಂಡದ ಗೆಲುವಿಗೆ ಕಾರಣವಾದ ಕಿವೀಸ್ ನಾಯಕ ಕೇನ್ ವಿಲಿಯಂಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಗೆಲುವಿನೊಂದಿಗೆ ಗ್ರೂಪ್-1ರಲ್ಲಿ 7 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ ವಿಲಿಯಂಸನ್ ಪಡೆಯ ಸೆಮೀಸ್ ಸ್ಥಾನ ಇನ್ನೂ ಖಚಿತವಾಗಿಲ್ಲ. ಕಿವೀಸ್ ಜೊತೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಸಹ ಸೆಮೀಸ್ ರೇಸ್‌ನಲ್ಲಿದೆ.