T20 CWC 2022 ಆಸ್ಟ್ರೇಲಿಯಾ(Australia)ದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ಅಫ್ಘಾನಿಸ್ತಾನ(Afghanistan) ತಂಡ ಹೊರಬಿದ್ದ ಬೆನ್ನಲ್ಲೇ, ಅಫ್ಘಾನಿಸ್ತಾನ ತಂಡದ ನಾಯಕತ್ವದಿಂದ ಮೊಹಮ್ಮದ್ ನಬಿ(Mohammad Nabi) ಕೆಳಗಿಳಿದಿದ್ದಾರೆ. ಆದರೆ ತಮ್ಮ ಈ ನಿರ್ಧಾರಕ್ಕೆ ತಂಡದ ನಿರ್ವಹಣೆ ಮತ್ತು ಆಯ್ಕೆಗಾರರೊಂದಿಗಿನ ಭಿನ್ನಾಭಿಪ್ರಾಯವೇ ಕಾರಣ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನ ತನ್ನ ವಿಶ್ವಕಪ್ ಅಭಿಯಾನವನ್ನು ಇಂಗ್ಲೆಂಡ್ ವಿರುದ್ಧ ಸೋಲಿನೊಂದಿಗೆ ಪ್ರಾರಂಭಿಸಿತು. ಆದರೆ ನಂತರ ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ನಡೆಯಬೇಕಿದ್ದ ಸೂಪರ್-12 ಪಂದ್ಯಗಳು ಮಳೆಯ ಕಾರಣದಿಂದಾಗಿ ರದ್ದಾಗಿತ್ತು. ಬಳಿಕ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲಿನ ಆಘಾತ ಕಂಡಿತು. ಆ ಮೂಲಕ ಗ್ರೂಪ್-1ರ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದೊಂದಿಗೆ ವಿಶ್ವಕಪ್ ಅಭಿಯಾನವನ್ನ ಮುಗಿಸಿತು. ಈ ಹಿಂದೆ ತಂಡದ ಆಯ್ಕೆ ಸಮಿತಿಯೊಂದಿಗಿನ ಭಿನ್ನಾಭಿಪ್ರಾಯಗಳಿಂದ ಸ್ಟಾರ್ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಅಫ್ಘಾನಿಸ್ತಾನ ತಂಡದ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದಿದ್ದರು. ಆ ನಂತರ ಯುಎಇಯಲ್ಲಿ ನಡೆದ 2021ರ ಟಿ20 ವಿಶ್ವಕಪ್‌ಗೆ ಮೊದಲು ಮೊಹಮ್ಮದ್ ನಬಿ ಅವರು ತಂಡದ ಕ್ಯಾಪ್ಟನ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಬೆನ್ನಲ್ಲೇ 37ರ ಹರೆಯದ ನಬಿ ಕೂಡ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಮೊಹಮ್ಮದ್ ನಬಿ, “ನಮ್ಮ ಟಿ20 ವಿಶ್ವಕಪ್ ಜರ್ನಿ ಮುಗಿದಿದೆ, ಇದರ ಫಲಿತಾಂಶ ನಾವು ಹಾಗೂ ನಮ್ಮ ತಂಡದ ಸಪೋರ್ಟರ್ಸ್‌ಗಳು ನಿರೀಕ್ಷಿಸಿದ ರೀತಿ ಬರಲಿಲ್ಲ. ಪಂದ್ಯದ ಫಲಿತಾಂಶದೊಂದಿಗೆ ನಾವು ಹತಾಶರಾಗಿದ್ದೇವೆ. ಕಳೆದ ಒಂದು ವರ್ಷದಿಂದ, ನಮ್ಮ ತಂಡದ ತಯಾರಿ ನಾಯಕನಿಗೆ ಬೇಕಾದ ಅಥವಾ ದೊಡ್ಡ ಪಂದ್ಯಾವಳಿಗೆ ಅಗತ್ಯವಿರುವ ಮಟ್ಟಕ್ಕೆ ಇರಲಿಲ್ಲ. ಮೇಲಾಗಿ, ಕಳೆದ ಪ್ರವಾಸಗಳಲ್ಲಿ ತಂಡದ ನಿರ್ವಹಣೆ, ಆಯ್ಕೆ ಸಮಿತಿ ಮತ್ತು ನಾನು ಒಂದೇ ಪುಟದಲ್ಲಿ ಇರಲಿಲ್ಲ. ಇದು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಿತು.” ಆದ್ದರಿಂದ, ಸರಿಯಾದ ಗೌರವದೊಂದಿಗೆ ತಕ್ಷಣವೇ ನಾನು ಕ್ಯಾಪ್ಟನ್ ಆಗಿ ಕೆಳಗಿಳಿಯಲು ಘೋಷಿಸುತ್ತೇನೆ.
“ಅಲ್ಲದೇ ಮಳೆಯ ನಡುವೆಯೂ ಪ್ರತಿ ಪಂದ್ಯಕ್ಕೆ ಮೈದಾನಕ್ಕೆ ಬಂದು ನಮಗೆ ಬೆಂಬಲ ನೀಡಿದ್ದೀರಿ, ವಿಶ್ವದೆಲ್ಲೆಡೆಯಿಂದ ನಮಗೆ ಬೆಂಬಲ ನೀಡಿದ್ದೀರಿ. ನಿಮ್ಮ ನಿಜವಾದ ಪ್ರೀತಿಯನ್ನ ಕೊನೆಯವರೆಗೂ ನಾವು ನೆನೆಯುತ್ತೇವೆ” ಎಂದಿದ್ದಾರೆ. ಈ ಹಿಂದೆಯೂ ಅಫ್ಘಾನ್ ತಂಡದ ನಾಯಕರಾಗಿದ್ದ ಮೊಹಮ್ಮದ್ ನಬಿ, 2013-14ರಲ್ಲಿ 12 ತಿಂಗಳ ಕಾಲ ಟಿ20ಯಲ್ಲಿ ತಂಡವನ್ನ ಮುನ್ನಡೆಸಿದ್ದರು. ಒಟ್ಟಾರೆ 35 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರುವ ಮೊಹಮ್ಮದ್ ನಬಿ, 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 18 ಸೋಲನುಭವಿಸಿದ್ದಾರೆ.
ಇದನ್ನೂ ಓದಿ – https://sportskarnataka.com/t20-cwc-2022-aus…t-in-their-hands/