ಆಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್(59*) ಸ್ಪೋಟಕ ಅರ್ಧಶತಕ ಹಾಗೂ ನಾಯಕ ಆರನ್ ಫಿಂಚ್(31*) ಅವರ ಜವಾಬ್ದಾರಿಯ ಬ್ಯಾಟಿಂಗ್ನಿಂದ ಆಸ್ಟ್ರೇಲಿಯಾ(Australia ತಂಡ ಶ್ರೀಲಂಕಾ(Sri Lanka) ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ತವರಿನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ(T20 World Cup) ಸೂಪರ್-12 ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಿತು.
ಪರ್ತ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಉಪಯುಕ್ತ ಆಟದಿಂದ 20 ಓವರ್ಗಳಲ್ಲಿ 6 ವಿಕೆಟ್ಗೆ 157 ರನ್ಗಳ ಪೈಪೋಟಿ ಮೊತ್ತ ಕಲೆಹಾಕಿತು. ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ 16.3 ಓವರ್ಗಳಲ್ಲಿ 3 ವಿಕೆಟ್ಗೆ 158 ರನ್ಗಳಿಸುವ ಮೂಲಕ 7 ವಿಕೆಟ್ಗಳಿಂದ ಗೆದ್ದುಬೀಗಿತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಸೋಲಿನ ಆರಂಭ ಕಂಡಿದ್ದ ಅತಿಥೇಯ ಆಸ್ಟ್ರೇಲಿಯಾ, ಬಲಿಷ್ಠ ಕಮ್ ಬ್ಯಾಕ್ ಮಾಡಿತು.
ಲಂಕಾ ಪೈಪೋಟಿ ಮೊತ್ತ:
ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭದಲ್ಲೇ ಕಸಲ್ ಮೆಂಡಿಸ್(5) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್ಗೆ ಜೊತೆಯಾದ ಪತುಮ್ ನಿಸ್ಸಂಕಾ(40) ಹಾಗೂ ಧನಂಜಯ ಡಿಸಿಲ್ವಾ(26) ಉತ್ತಮ ಬ್ಯಾಟಿಂಗ್ನಿಂದ 69 ರನ್ ಕಲೆಹಾಕಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ನಿಸ್ಸಂಕಾ, ರನ್ಗಳಿಸುವ ಆತುರದಲ್ಲಿ ರನೌಟ್ ಬಲಿಯಾದರು. ಬಳಿಕ ಬಂದ ರಾಜಪಕ್ಸ(7), ಶನಕ(3) ಹಾಗೂ ಹಸರಂಗ(1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಜೊತೆಯಾದ ಚರಿತ್ ಅಸಲಂಕ(38*) ಹಾಗೂ ಕರುಣಾರತ್ನೆ(14*) ತಂಡದ ಮೊತ್ತವನ್ನ 157ಕ್ಕೆ ಏರಿಸಿದರು. ಆಸೀಸ್ ಪರ ಹೇಜಲ್ವುಡ್, ಕಮ್ಮಿನ್ಸ್, ಸ್ಟಾರ್ಕ್, ಅಗರ್ ಹಾಗೂ ಮ್ಯಾಕ್ಸ್ವೆಲ್ ತಲಾ 1 ವಿಕೆಟ್ ಪಡೆದರು.
ಫಿಂಚ್ ಪಡೆಯ ಪರದಾಟ:
ಶ್ರೀಲಂಕಾ ನೀಡಿದ 158 ರನ್ ಟಾರ್ಗೆಟ್ ಚೇಸ್ ಮಾಡಿದ ಆಸೀಸ್ ಸಾಧಾರಣ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(11) ರನ್ಗಳಿಸಿ ಹೊರ ನಡೆದರೆ. ಮೊದಲ ಕ್ರಮಾಂಕದಲ್ಲಿ ಬಂದ ಮಿಚೆಲ್ ಮಾರ್ಷ್(18) ಅಲ್ಪಮೊತ್ತಕ್ಕೆ ಔಟಾದರು. ನಂತರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್(23) ಬಿರುಸಿನ ಆಟವಾಡಿ ವಿಕೆಟ್ ಒಪ್ಪಿಸಿದರು. ಪರಿಣಾಮ ಆಸ್ಟ್ರೇಲಿಯಾ 12.2 ಓವರ್ಗಳಲ್ಲಿ 89 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಸ್ಟಾಯ್ನಿಸ್ ಸ್ಪೋಟಕ ಆಟ:
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲ್ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆರಂಭದಿಂದಲೇ ಭರ್ಜರಿ ಹೊಡೆತಕ್ಕೆ ಕೈಹಾಕಿದ ಸ್ಟಾಯ್ನಿಸ್, ಕೇವಲ 18 ಬಾಲ್ಗಳಲ್ಲಿ 4 ಬೌಂಡರಿ, 6 ಸಿಕ್ಸ್ ನೆರವಿನಿಂದ ಅಜೇಯ 59 ರನ್ಗಳಿಸಿ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಕೇವಲ 16 ಬಾಲ್ಗಳಲ್ಲಿ ಅರ್ಧಶತಕ ಪೂರೈಸಿದ ಸ್ಟಾಯ್ನಿಸ್, ಟಿ20 ವಿಶ್ವಕಪ್ ಇತಿಹಾಸದಲ್ಲೇ 2ನೇ ವೇಗದ ಅರ್ಧಶತಕ ದಾಖಲಿಸಿದರು. ಸ್ಟಾಯ್ನಿಸ್ ಹಾಗೂ ಫಿಂಚ್ ಜೋಡಿ 69* ರನ್ಗಳ ಜೊತೆಯಾಟದಿಂದ ತಂಡಕ್ಕೆ ಗೆಲುವು ತಂದುಕೊಟ್ಟರು. ಲಂಕಾ ಪರ ಧನಂಜಯ, ಕರುಣಾರತ್ನೆ ಹಾಗೂ ತೀಕ್ಷಣ ತಲಾ 1 ವಿಕೆಟ್ ಪಡೆದರು. ತಂಡದ ಗೆಲುವಿಗೆ ಕಾರಣರಾದ ಸ್ಟಾಯ್ನಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.