ಟಿ20 ವಿಶ್ವಕಪ್(T20 World Cup) ಟೂರ್ನಿಯ ಎರಡನೇ ಸೆಮಿಫೈನಲ್(Semifinal) ಹಣಾಹಣಿ ನೋಡಲು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು(Cricket Fans) ಕಾಯುತ್ತಿದ್ದಾರೆ. ಭಾರತ(Team India) ಹಾಗೂ ಇಂಗ್ಲೆಂಡ್(England) ನಡುವೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಎರಡು ತಂಡಗಳ ಪ್ರಮುಖ ಆಟಗಾರರ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯಲಿದೆ.
ಅಡಿಲೇಡ್‌ನ ಓವಲ್ ಮೈದಾನದಲ್ಲಿ ನಡೆಯುವ ಮಹತ್ವದ ಪಂದ್ಯಕ್ಕೆ ಉಭಯ ತಂಡಗಳ ಆಟಗಾರರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ರೋಚಕ ಪಂದ್ಯದಲ್ಲಿ ಸ್ಟಾರ್ ಪ್ಲೇಯರ್‌ಗಳ ಮುಖಾಮುಖಿ ಅತ್ಯಂತ ಕುತೂಹಲ ಮೂಡಿಸಿದೆ. ಇಂಡೋ-ಇಂಗ್ಲೆಂಡ್ ಪಂದ್ಯದ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಹಾಗೂ ಇಂಗ್ಲೆಂಡ್ ಯುವ ವೇಗಿ ಸ್ಯಾಮ್ ಕರ್ರನ್ ನಡುವಿನ ಮುಖಾಮುಖಿ ಕುತೂಹಲ ಮೂಡಿಸಿದೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಹೊರಬಂದಿಲ್ಲ. ಆದರೆ ಸ್ಯಾಮ್ ಕರ್ರನ್ ಅದ್ಭುತ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್ ತಂಡದ ಬೌಲರ್‌ಗಳ ಪರ ಪ್ರಸಕ್ತ ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಿಟ್ ಮ್ಯಾನ್ ರೋಹಿತ್ ಶರ್ಮ, ಎಡಗೈ ವೇಗಿಗಳ ವಿರುದ್ಧ ರನ್‌ಗಳಿಸಲು ಸಾಕಷ್ಟು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮ ಹಾಗೂ ಸ್ಯಾಮ್ ಕರ್ರನ್ ನಡುವಿನ ಹಣಾಹಣಿ ಕುತೂಹಲ ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ಹಾಗೂ ಆದಿಲ್ ರಶೀದ್ ನಡುವೆ ಮುಖಾಮುಖಿ ಸಹ ಭಾರೀ ಕುತೂಹಲ ಕೆರಳಿಸಿದೆ. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಸೂಪರ್ 12 ಹಂತದಲ್ಲಿ ಆಡಿರುವ ಐದು ಪಂದ್ಯಗಳಲ್ಲಿ 246 ರನ್‌ಗಳಿಸಿ ಮಿಂಚಿದ್ದಾರೆ. ಕಿಂಗ್ ಕೊಹ್ಲಿಯ ಯಶಸ್ಸಿನ ಓಟಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಆದಿಲ್ ರಶೀದ್ ಹೊಂದಿದ್ದು, ಚೇಸ್ ಮಾಸ್ಟರ್‌ನ ರನ್‌ಗಳಿಕೆಯ ಓಟಕ್ಕೆ ಆದಿಲ್ ರಶೀದ್ ಯಾವ ರೀತಿ ಬ್ರೇಕ್ ಹಾಕ್ತಾರೆ ಕಾದು ನೋಡಬೇಕಿದೆ.
ಹೈ-ವೋಲ್ಟೇಜ್‌ನ ರೋಚಕ ಸೆಮೀಸ್ ಕದನದಲ್ಲಿ ಜೋಸ್ ಬಟ್ಲರ್ ಹಾಗೂ ಭುವನೇಶ್ವರ್ ಕುಮಾರ್ ನಡುವಿನ ಕಾದಾಟ ಕುತೂಹಲ ಮೂಡಿಸಿದೆ. ಇಂಗ್ಲೆಂಡ್ ನಾಯಕ ಬಟ್ಲರ್, ಕಳೆದ ಪಂದ್ಯದಲ್ಲಿ ಕಿವೀಸ್ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಬಟ್ಲರ್ ವಿರುದ್ಧದ ಮುಖಾಮುಖಿಯಲ್ಲಿ ಮೇಲುಗೈ ಹೊಂದಿರುವ ಭುವನೇಶ್ವರ್ ಕುಮಾರ್, ಟಿ20 ಕ್ರಿಕೆಟ್‌ನಲ್ಲಿ ಈವರೆಗೂ ಐದು ಬಾರಿ ಔಟ್ ಮಾಡಿದ್ದಾರೆ. ಅಲ್ಲದೇ ಭುವನೇಶ್ವರ್ ಕೇವಲ 30 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ.
ಇವರೊಂದಿಗೆ ಇಂಗ್ಲೆಂಡ್‌ನ ಸ್ಟೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಭಾರತದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಮುಖಾಮುಖಿಗೆ ಸಜ್ಜಾಗಿದ್ದಾರೆ. ಟೀಂ ಇಂಡಿಯಾದ ʼಮಿಸ್ಟರ್ 360ʼ ಅವರ ಅಬ್ಬರಕ್ಕೆ ಇಂಗ್ಲೆಂಡ್‌ನ ʼಸ್ಪೀಡ್ ಸ್ಟಾರ್ʼ ಮಾರ್ಕ್ ವುಡ್ ಹೇಗೆ ಕಡಿವಾಣ ಹಾಕುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ.