ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್(ICC T20 World Cup) ಟೂರ್ನಿಯ ಸೂಪರ್-12 ಪಂದ್ಯದಲ್ಲಿ ಭಾರತ(Team India) ಹಾಗೂ ಸೌತ್ ಆಫ್ರಿಕಾ(South Africa) ತಂಡಗಳು ಬಲಿಷ್ಠ ಹಣಾಹಣಿಗೆ ಸಜ್ಜಾಗಿವೆ. ಟೂರ್ನಿಯಲ್ಲಿ ಯಶಸ್ಸಿನ ಅಲೆಯಲ್ಲಿರುವ ಎರಡು ತಂಡಗಳು ಗೆಲುವಿನ ನಾಗಾಲೋಟ ಮುಂದುವರಿಸುವ ಲೆಕ್ಕಾಚಾರದಲ್ಲಿದೆ. ಮೇಲ್ನೋಟಕ್ಕೆ ಉಭಯ ತಂಡಗಳು ಬಲಿಷ್ಠವಾಗಿದ್ದು, ಗೆದ್ದೇ ಗೆಲ್ಲುವ ಆತ್ಮವಿಶ್ವಾಸದಲ್ಲಿ ನಾಳಿನ(ಅ.30) ಪಂದ್ಯಕ್ಕಾಗಿ ಸಜ್ಜಾಗಿವೆ. ಆದರೆ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್ ಇತಿಹಾಸ ಗಮನಿಸಿದರೆ, ಹರಿಣಗಳ ವಿರುದ್ಧ ಟೀಂ ಇಂಡಿಯಾದ ಪ್ರಾಬಲ್ಯ ಜೋರಾಗಿದೆ.
T20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಸೌತ್ ಆಫ್ರಿಕಾ ತಂಡಗಳು ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ನಾಲ್ಕು ಬಾರಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. 2009ರ ಜೂನ್ನಲ್ಲಿ ನಾಟಿಂಗ್ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಸೌತ್ ಆಫ್ರಿಕಾ ಭಾರತವನ್ನ 12 ರನ್ಗಳಿಂದ ಮಣಿಸಿತ್ತು. ಈ ಹಿಂದೆ 2014ರಲ್ಲಿ ನಡೆದ ಜಿದ್ದಾಜಿದ್ದಿನ ಕಾಳಗದಲ್ಲಿ ಭಾರತ 6 ವಿಕೆಟ್ಗಳಿಂದ ಸೌತ್ ಆಫ್ರಿಕಾ ತಂಡವನ್ನ ಮಣಿಸಿತ್ತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ, 44 ಬಾಲ್ಗಳಲ್ಲಿ 72* ರನ್ಗಳಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು.
ಇದೇ ವರ್ಷದ ಆರಂಭದಲ್ಲಿ ಭಾರತ ಆಡಿದ ಎಂಟು T20I ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದರೆ, ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಒಂದು ಪಂದ್ಯ ಫಲಿತಾಂಶ ಕಂಡಿರಲಿಲ್ಲ. ಇದೀಗ ಎರಡು ತಂಡಗಳು ಪರ್ತ್ ಅಂಗಳದಲ್ಲಿ ಟಿ20 ವಿಶ್ವಕಪ್ನ ಪ್ರಮುಖ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ. ಸರಣಿಯಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಟಿ20 ವಿಶ್ವಕಪ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸುತ್ತಾ? ಕಾದುನೋಡಬೇಕಿದೆ.