T20 CWC 2022 ಆರಂಭಿಕ ಬ್ಯಾಟ್ಸ್ಮನ್ ಪತುಮ್ ನಿಸ್ಸಂಕ(Pathum Nissanka)(67) ಅವರ ಜವಾಬ್ದಾರಿಯ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್(England) ವಿರುದ್ಧದ ಸೂಪರ್-12 ಪಂದ್ಯದಲ್ಲಿ ಶ್ರೀಲಂಕಾ(Sri Lanka) 142 ರನ್ಗಳ ಟಾರ್ಗೆಟ್ ಸೆಟ್ ಮಾಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ಗಳಿಸಿದೆ. ಲಂಕಾ ಪರ ಪತುಮ್ ನಿಸ್ಸಂಕ(67) ಉತ್ತಮ ಬ್ಯಾಟಿಂಗ್ನಿಂದ ತಂಡಕ್ಕೆ ಆಸರೆಯಾದರು. ಉಳಿದಂತೆ ಕುಸಲ್ ಮೆಂಡಿಸ್(18) ಹಾಗೂ ರಾಜಪಕ್ಸ(22) ಉಪಯುಕ್ತ ಕಾಣಿಕೆ ನೀಡಿದರು. ಲಂಕಾ ಪರ ಇನ್ನಿಂಗ್ಸ್ ಆರಂಭಿಸಿದ ಪತುಮ್ ನಿಸ್ಸಂಕ(67) ಹಾಗೂ ಕುಸಲ್ ಮೆಂಡಿಸ್(18) ಮೊದಲ ವಿಕೆಟ್ಗೆ 39 ರನ್ಗಳ ಉತ್ತಮ ಮೊತ್ತ ಕಲೆಹಾಕಿದರು. ಆದರೆ ನಂತರ ಕಣಕ್ಕಿಳಿದ ಧನಂಜಯ ಡಿಸಿಲ್ವಾ(9) ಹಾಗೂ ಚರಿತ್ ಅಸಲಂಕ(8) ಬಹುಬೇಗನೆ ನಿರ್ಗಮಿಸಿದರೆ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ದಸುನ್ ಶನಕ(3) ತಂಡಕ್ಕೆ ಆಸರೆ ಆಗುವಲ್ಲಿ ವಿಫಲರಾದರು. ಕೊನೆಯಲ್ಲಿ ವನಿದು ಹಸರಂಗ(9) ಅಲ್ಪಮೊತ್ತ ಕಲೆಹಾಕಿದರು. ಅಂತಿಮವಾಗಿ ಶ್ರೀಲಂಕಾ 141 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಆರಂಭದಲ್ಲಿ ಸ್ವಲ್ಪಮಟ್ಟಿನ ರನ್ಬಿಟ್ಟುಕೊಟ್ಟರು, ನಂತರದಲ್ಲಿ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್, ಲಂಕಾ ಬ್ಯಾಟ್ಸ್ಮನ್ಗಳ ಮೇಲೆ ಹಿಡಿತ ಸಾಧಿಸುವ ಮೂಲಕ ಸುಲಭವಾಗಿ ರನ್ಗಳಿಸುವುದಕ್ಕೆ ಕಡಿವಾಣ ಹಾಕಿದರು. ಆಂಗ್ಲರ ಪರ ಮಾರ್ಕ್ ವುಡ್ 3 ವಿಕೆಟ್ ಪಡೆದು ಮಿಂಚಿದರೆ. ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್ ಹಾಗೂ ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.
ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳಲು ಗೆಲುವಿನ ನಿರೀಕ್ಷೆಯಲ್ಲಿರುವ ಇಂಗ್ಲೆಂಡ್, ಶ್ರೀಲಂಕಾ ನೀಡಿರುವ 142 ರನ್ಗಳ ಗುರಿ ಮುಟ್ಟುವ ಲೆಕ್ಕಾಚಾರದಲ್ಲಿದೆ. ಒಂದೊಮ್ಮೆ ಇಂಗ್ಲೆಂಡ್ 6.2 ಓವರ್ಗಳಲ್ಲೇ 142 ರನ್ಗಳನ್ನ ಚೇಸ್ ಮಾಡಿದ್ದೇ ಆದಲ್ಲಿ, ಗ್ರೂಪ್-1ರ ಅಗ್ರಸ್ಥಾನ ತನ್ನದಾಗಿಸಿಕೊಳ್ಳಲಿದೆ. ಆದರೆ ಇದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಜಾಸ್ ಬಟ್ಲರ್ ಪಡೆ ಕೇವಲ ಗೆಲುವಿನೊಂದಿಗೆ ಸೆಮೀಸ್ಗೆ ಎಂಟ್ರಿಕೊಡುವ ನಿರೀಕ್ಷೆಯಲ್ಲಿದೆ. ಆದರೆ ಲಂಕಾ ಸ್ಪಿನ್ನರ್ಗಳ ಬೌಲಿಂಗ್ ದಾಳಿಯನ್ನ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಯಾವ ರೀತಿ ಎದುರಿಸುತ್ತಾರೆ ಕಾದು ನೋಡಬೇಕಿದೆ.