T20 CWC 2022 ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತೋರಿದ ಸಂಘಟಿತ ಪ್ರದರ್ಶನದಿಂದ ಶ್ರೀಲಂಕಾ(Sri Lanka) ವಿರುದ್ಧದ ಸೂಪರ್-12 ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್(England), ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ನಿಗದಿತ 20 ಓವರ್‌ಗಳಲ್ಲಿ 141/8 ರನ್‌ಗಳಿಸಿತು. ಈ ಗುರಿಯನ್ನ ಬೆನ್ನತ್ತಿದ ಇಂಗ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ಸಂಕಷ್ಟ ಅನುಭವಿಸಿದರು, 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 144 ರನ್‌ಗಳಿಸಿ ಗೆಲುವಿನ ದಡಸೇರಿತು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಗ್ರೂಪ್-1ರ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಪತುಮ್ ನಿಸ್ಸಂಕ(67) ಉತ್ತಮ ಬ್ಯಾಟಿಂಗ್‌ನಿಂದ ತಂಡಕ್ಕೆ ಆಸರೆಯಾದರು. ಉಳಿದಂತೆ ಕುಸಲ್ ಮೆಂಡಿಸ್(18) ಹಾಗೂ ರಾಜಪಕ್ಸ(22) ಉಪಯುಕ್ತ ಕಾಣಿಕೆ ನೀಡಿದರು. ನಂತರ ಕಣಕ್ಕಿಳಿದ ಧನಂಜಯ ಡಿಸಿಲ್ವಾ(9) ಹಾಗೂ ಅಸಲಂಕ(8) ಬಹುಬೇಗನೆ ನಿರ್ಗಮಿಸಿದರೆ. ನಾಯಕ ದಸುನ್ ಶನಕ(3) ತಂಡಕ್ಕೆ ಆಸರೆ ಆಗುವಲ್ಲಿ ವಿಫಲರಾದರು. ಕೊನೆಯಲ್ಲಿ ವನಿದು ಹಸರಂಗ(9) ಅಲ್ಪಮೊತ್ತ ಕಲೆಹಾಕಿದರು. ಅಂತಿಮವಾಗಿ ಶ್ರೀಲಂಕಾ 141 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆಂಗ್ಲರ ಪರ ಮಾರ್ಕ್ ವುಡ್ 3 ವಿಕೆಟ್ ಪಡೆದು ಮಿಂಚಿದರೆ. ಸ್ಟೋಕ್ಸ್, ವೋಕ್ಸ್, ಕರ್ರನ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.
ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಜೋಸ್ ಬಟ್ಲರ್(28) ಹಾಗೂ ಅಲೆಕ್ಸ್ ಹೇಲ್ಸ್(47) ಭರ್ಜರಿ ಆರಂಭ ನೀಡಿದರು. ಪವರ್-ಪ್ಲೇನಲ್ಲಿ ಸ್ಪೋಟಕ ಆಟವಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 75 ರನ್‌ಗಳಿಸಿ ಅತ್ಯುತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಉತ್ತಮವಾಗಿ ಆಡುತ್ತಿದ್ದ ಈ ಇಬ್ಬರು ಕೇವಲ 7 ರನ್‌ಗಳ ಅಂತರದಲ್ಲಿ ಪೆವಿಲಿಯನ್ ಸೇರಿದರು. ಆದರೆ ನಂತರ ಕಣಕ್ಕಿಳಿದ ಹ್ಯಾರಿ ಬ್ರೂಕ್(4), ಲಿವಿಂಗ್ಸ್ಟನ್(4), ಮೊಯಿನ್ ಅಲಿ(1) ಹಾಗೂ ಸ್ಯಾಮ್ ಕರ್ರನ್(6) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಎಚ್ಚರಿಕೆ ಆಟವಾಡಿದ ಆಲ್ರೌಂಡರ್ ಬೆನ್ ಸ್ಟೋಕ್ಸ್(42*) ತಂಡಕ್ಕೆ ಆಸರೆಯಾಗಿ ತಂಡವನ್ನ ಗೆಲುವಿನ ದಡಸೇರಿಸಿದರು. ಶ್ರೀಲಂಕಾ ಪರ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ ಹಸರಂಗ, ಧನಂಜಯ ಡಿಸಿಲ್ವಾ ಹಾಗೂ ಲಹಿರು ಕುಮಾರ ತಲಾ 2 ವಿಕೆಟ್ ಪಡೆದರು.
ಕಮರಿದ ಆಸೀಸ್ ಕನಸು:
ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ತವರಿನಲ್ಲಿ ನಡೆದ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಸೋಲಿನ ಆರಂಭ ಕಂಡಿದ್ದ ಆಸ್ಟ್ರೇಲಿಯಾ, ಬಳಿಕ ನಡೆದ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದರು ಸೆಮೀಸ್ ಪ್ರವೇಶದ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಗೆದ್ದಿದ್ದರೆ, ಆರನ್ ಫಿಂಚ್ ಪಡೆಯ ಸೆಮೀಸ್ ಪ್ರವೇಶದ ಕನಸು ನನಸಾಗುತ್ತಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಸೋಲನುಭವಿಸಿದ ಬೆನ್ನಲ್ಲೇ, ಕಾಂಗರೂ ಪಡೆಯ ಸೆಮೀಸ್ ಕನಸು ಸಹ ಭಗ್ನಗೊಂಡಿದೆ.