ಟಿ20 ವಿಶ್ವಕಪ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದ ಪಾಕಿಸ್ತಾನದ ಆರಂಭಿಕ ಜೋಡಿ ನಿರ್ಣಾಯಕ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ.
ಟಿ20 ಕ್ರಿಕೆಟ್ನಲ್ಲಿ ಪ್ರಸಕ್ತ ವರ್ಷ ಭರ್ಜರಿ ಫಾರ್ಮ್ನಲ್ಲಿದ್ದ ಪಾಕಿಸ್ತಾನದ ಆರಂಭಿಕರಾದ ಬಾಬರ್ ಆಜ಼ಂ(Babar Azam) ಹಾಗೂ ಮೊಹಮ್ಮದ್ ರಿಜ್ವಾನ್(Mohammad Rizwan) ಜೋಡಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದ ಪಂದ್ಯಗಳಲ್ಲಿ ಈ ಇಬ್ಬರ ಬ್ಯಾಟಿಂಗ್ನಿಂದಲೂ ರನ್ ಬಂದಿರಲಿಲ್ಲ. ಆದರೆ ಕಿವೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮಿಂಚಿದ ಈ ಇಬ್ಬರು, ಅದ್ಭುತ ಜೊತೆಯಾಟದ ಮೂಲಕ ನ್ಯೂಜಿ಼ಲೆಂಡ್ ಬೌಲರ್ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ಕಿವೀಸ್ ನೀಡಿದ 153 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಬಾಬರ್ ಆಜ಼ಂ ಹಾಗೂ ಮೊಹಮ್ಮದ್ ರಿಜ್ವಾನ್ ಮೊದಲ ವಿಕೆಟ್ಗೆ 105 ರನ್ಗಳ ಶತಕದ ಜೊತೆಯಾಟವಾಡಿ ಗೆಲುವಿನ ಹಾದಿಯನ್ನ ಸುಲಭಗೊಳಿಸಿದರು. ನಾಯಕ ಬಾಬರ್ ಆಜ಼ಂ(53) ರನ್ಗಳಿಸಿ ಮಿಂಚಿದರೆ. ಮೊಹಮ್ಮದ್ ರಿಜ್ವಾನ್ ಸಹ ಅರ್ಧಶತಕ ಸಿಡಿಸಿ ನಿರ್ಣಾಯಕ ಹಂತದಲ್ಲಿ ಅದ್ಭುತ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೇ ಫೈನಲ್ನಲ್ಲಿ ಎದುರಾಗುವ ತಂಡಕ್ಕೆ ಎಚ್ಚರಿಕೆಯನ್ನ ಸಹ ನೀಡಿದರು.
ಟೂರ್ನಿಯ ಆರಂಭದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಜೋಡಿ ಅಂದುಕೊಂಡಂತೆ ಆಡುವಲ್ಲಿ ವಿಫಲವಾಗಿತ್ತು. ಸೂಪರ್-12ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಈ ಜೋಡಿ ನಂತರದಲ್ಲಿ ಜಿಂಬಾಬ್ವೆ ವಿರುದ್ಧವೂ 13 ರನ್ಗಳಿಗೆ ಬೇರ್ಪಟ್ಟಿತ್ತು. ಮೂರನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ರಿಜ್ವಾನ್ ಬ್ಯಾಟಿಂಗ್ ಲಯ ಕಂಡುಕೊಂಡರು, ನಾಯಕ ಬಾಬರ್ ಆಜ಼ಂ, ಬಹುಬೇಗನೆ ವಿಕೆಟ್ ಒಪ್ಪಿಸಿದ್ದರು. ನಂತರದಲ್ಲಿ ಸೌತ್ ಆಫ್ರಿಕಾ ವಿರುದ್ಧ ಕೂಡ ಒಂದಂಕ್ಕಿಯ ಮೊತ್ತಕ್ಕೆ ಈ ಇಬ್ಬರು ಬ್ಯಾಟ್ಸ್ಮನ್ಗಳು ವಿಕೆಟ್ ಕೈಚಲ್ಲಿದ್ದರು. ಬಾಂಗ್ಲಾದೇಶ ವಿರುದ್ಧದ ಕಳೆದ ಪಂದ್ಯದಲ್ಲಿ ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟದಿಂದ ಕಮ್ಬ್ಯಾಕ್ ಮಾಡುವ ಸೂಚನೆ ನೀಡಿದ್ದರು.