ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ – ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿ.ವಿ. ಸಿಂಧೂ…
ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧೂ ಮತ್ತು ಎಚ್.ಎಸ್. ಪ್ರಣೋಯ್ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಅಗ್ರ ಶ್ರೇಯಾಂಕಿತೆ ಹಾಗೂ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ ಅವರು ಕೇವಲ 33 ನಿಮಿಷಗಳ ಹೋರಾಟದಲ್ಲಿ ಅಮೆರಿಕಾದ ಲಾರೆನ್ ಲ್ಯಾಮ್ ಅವರನ್ನು ಸೋಲಿಸಿದ್ರು. ಎರಡನೇ ಸುತ್ತಿನ ಪಂದ್ಯದ ಆರಂಭದಿಂದಲೇ ಅಬ್ಬರದ ಆಟವನ್ನಾಡಿದ ಪಿ.ವಿ. ಸಿಂಧೂ 21-16, 21-13 ನೇರ ಸೆಟ್ ಗಳಿಂದ ಲಾರೆನ್ ಅವರನ್ನು ಮಣಿಸಿದ್ರು.
ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ. ಸಿಂಧೂ ಅವರು ಆರನೇ ಶ್ರೇಯಾಂಕಿತೆ ಸುಪಾನಿಡಾ ಕಾಟೆಥೋಂಗ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣೋಯ್ ಅವರು 21-11, 16-21, 21-18ರಿಂದ ಪ್ರಿಯಾಂಶು ರಾಜ್‍ವಾಟ್ ಅವರನ್ನು ಸೋಲಿಸಿದ್ರು. ಕ್ವಾರ್ಟರ್ ಫೈನಲ್ ನಲ್ಲಿ ಪ್ರಣೋಯ್ ಫ್ರಾನ್ಸ್ ನ ಆರ್ನಾಡ್ ಮಾಕ್ರ್ಲೆ ಅವರನ್ನು ಎದುರಿಸಲಿದ್ದಾರೆ.
ಇನ್ನುಳಿದ ಪಂದ್ಯಗಳಲ್ಲಿ ಆಕರ್ಶಿ ಕಶ್ಯಪ್ 21-9, 21-6ರಿಂದ ಸಾಯಿ ಉತ್ತೆಜಿತಾ ರಾವ್ ಅವರನ್ನು ಮಣಿಸಿದ್ರೆ, ಮಾಲ್ವಿಕಾ ಬಂಸೋದ್ 21-10, 21-8ರಿಂದ ಪ್ರೇರಣಾ ನೀಲೂರಿ ಅವರನ್ನು ಸೋಲಿಸಿದ್ರು. ಹಾಗೇ ಸಮಿಯಾ ಇಮಾದ್ ಫಾರೂಕಿ 21-6, 21-15ರಿಂದ ಕನಿಕಾ ಕನ್ವಾಲ್ ಅವರನ್ನು ಪರಾಭವಗೊಳಿಸಿದ್ರು.
ಪುರುಷರ ಸಿಂಗಲ್ಸ್ ನಲ್ಲಿ ಮಿಥುನ್ ಮಂಜುನಾಥ್ 16-21, 21-16, 23-21ರಿಂದ ಮಲೆಶಿಯಾದ ಸೂಂಗ್ ಜೂ ವೆನ್ ಅವರನ್ನು ಸೋಲಿಸಿದ್ರು.