India ಸೂರ್ಯಕುಮಾರ್ ಯಾದವ್ ಐಸಿಸಿ ನಂ.1 ಬ್ಯಾಟರ್. ಬೌಲರ್ ಯಾರೇ ಆಗಿರಲಿ, ಪಿಚ್ ಯಾವುದೇ ಆಗಿರಲಿ, ಭಯ ಭೀತಿ ಇಲ್ಲದೇ ನಿರ್ಭಿತಿಯಿಂದ ದಂಡಿಸೋದು ಅಷ್ಟೇ ಈತನಿಗೆ ಗೊತ್ತು. ಇಡೀ ವಿಶ್ವಕಪ್ ಟೂರ್ನಿಯುದ್ದಕ್ಕೂ ಅಬ್ಬರಿಸುತ್ತಿರುವ ಸೂರ್ಯ, ನಿನ್ನೆ ನಡೆದ ಸೂಪರ್ 12 ಪಂದ್ಯದಲ್ಲೂ ಜಿಂಬಾಬ್ವೆ ವಿರುದ್ಧ ಮತ್ತೊಂದು ಸೂಪರ್ ಇನ್ನಿಂಗ್ಸ್ ಆಡಿದರು. ಕೇವಲ 25 ಎಸೆತಗಳಲ್ಲಿ ಕ್ರಮವಾಗಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 61 ರನ್ ಗಳಿಸಿದರು. 244 ರ ಸ್ಟ್ರೈಕ್ ರೇಟ್‌ನಲ್ಲಿ ಅಬ್ಬರಿಸಿದ ಸೂಪರ್ ಸ್ಟಾರ್, ಈ ವರ್ಷದಲ್ಲಿ ಒಂದು ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.
ಈ ಸೂರ್ಯ ಪ್ರದರ್ಶನ ಕಂಡು ಇಡೀ ಕ್ರಿಕೆಟ್ ಲೋಕವೇ ಫಿದಾ ಆಗಿದೆ. ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ, ಆತನ ಬ್ಯಾಟಿಂಗ್ ವೈಭವವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಸೂರ್ಯಕುಮಾರ್ ಯಾದವ್ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಸೂರ್ಯಕುಮಾರ್ ಆಡಿರುವ ಪ್ರತಿ ಇನಿಂಗ್ಸ್‌ಗಳು ಕೂಡ 360 ಡಿಗ್ರಿ ಆಟವಾಗಿದೆ. ಆತ ಕ್ರಿಕೆಟ್ ಜಗತ್ತಿನ ನೂತನ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್‌ಮನ್. ವಿಶ್ವಕಪ್ ಟೂರ್ನಿಯಲ್ಲಿ ಒಂದು ವೇಳೆ ಆತ ಅಬ್ಬರಿಸದೇ ಇದ್ದರೆ ಟೀಮ್ ಇಂಡಿಯಾ, 140-150 ರನ್‌ಗಳನ್ನು ಗಳಿಸುವುದು ಕೂಡ ಕಷ್ಟವಾಗುತ್ತದೆ. ಕ್ರಿಕೆಟ್‌ನ ಬುಕ್‌ನಲ್ಲಿರುವ ಎಲ್ಲಾ ಹೊಡೆತಗಳು ಅವರ ಬತ್ತಳಿಕೆಯಲ್ಲಿದೆ ಎಂದು ಅವರು ಹೊಗಳಿದ್ದಾರೆ.
ಟೀಮ್ ಇಂಡಿಯಾ ತನ್ನ ಮೊತ್ತ ಕಾಯ್ದುಕೊಳ್ಳಲು ಬೇಕಿರುವ ಗುರಿ ತಂದುಕೊಡುವಲ್ಲಿ ನೆರವಾಗುತ್ತಿರುವ ಬ್ಯಾಟ್ಸ್‌ಮನ್ ಎಂದರೆ ಅದು ಸೂರ್ಯ. ಜಿಂಬಾಬ್ವೆ ಎದುರು ಭಾರತ ತಂಡ ಕಲೆಹಾಕಿದ ಮೊತ್ತ, ಎಂಸಿಜಿ ಅಂಗಳದಲ್ಲಿ ಭಾರತದ ಗರಿಷ್ಠ ಟಿ20 ಸ್ಕೋರ್ ಆಗಿದೆ. ಸೂರ್ಯ ಅವರ ಅಜೇಯ 61 ರನ್ ಸಿಗದೇ ಇದ್ದರೆ ಭಾರತ ತಂಡ 150ರ ಗಡಿ ಕೂಡ ದಾಟುತ್ತಿರಲಿಲ್ಲ ಎಂದು ಗವಾಸ್ಕರ್ ತಿಳಿಸಿದ್ದಾರೆ.