ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸದ ಬಿಸಿಸಿಐ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್, ಮೊಹಾಲಿನಲ್ಲಿ ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯ ನಡೆಯುತ್ತಿರುವುದು ನಿರಾಶಾದಾಯಕ ಎಂದಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯ ವಿರಾಟ್ ಕೊಹ್ಲಿಗೆ ಅವರ ಕ್ರಿಕೆಟ್ ವೃತ್ತಿ ಜೀವನದ ವಿಶೇಷ ಪಂದ್ಯವಾಗಿದ್ದು, ಈ ಪಂದ್ಯ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವಾಗಿದೆ. ಆದರೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್(ಪಿಸಿಎ) ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದ್ದು, ಪಂಜಾಬ್‌ನಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಕೋವಿಡ್ ಪ್ರೋಟೋಕಾಲ್ ದೃಷ್ಟಿಯಿಂದ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಆದರೆ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಸುನೀಲ್ ಗವಾಸ್ಕರ್, ನೀವು ಆಡುವ ಯಾವುದೇ ಕ್ರೀಡೆಯಲ್ಲಿ ಪ್ರೇಕ್ಷಕರು ಇರಬೇಕೆಂದು ಬಯಸುತ್ತೀರಿ. ಇತ್ತೀಚಿಗೆ ದಿನದಲ್ಲಿ ಭಾರತ ಪ್ರೇಕ್ಷಕರಿಲ್ಲದೆ ಪಂದ್ಯಗಳನ್ನು ಆಡುತ್ತಿದೆ. ಆದರೆ ಯಾವುದೇ ನಟರು ಅಥವಾ ಆಟಗಾರರು ಪ್ರೇಕ್ಷಕರ ಎದುರು ಪ್ರದರ್ಶನ ನೀಡಲು ಬಯಸುತ್ತಾರೆ. 100ನೇ ಟೆಸ್ಟ್ ಅನ್ನೋದು ಅತ್ಯಂತ ವಿಶೇಷವಾಗಿದ್ದು, ಇಂತಹ ವಿಶೇಷ ಪಂದ್ಯಕ್ಕೆ ಪ್ರೇಕ್ಷಕರಿಲ್ಲದೆ ಇರುವುದು ನಿರಾಶಾದಾಯಕವಾಗಿದೆ. ಆದರೆ ಪಂದ್ಯ ನಡೆಯುವ ಮೊಹಾಲಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ಕ್ರಿಕೆಟ್ ಅಭಿಮಾನಿಗಳ ಬೇಸರ:
ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಕೊರೊನಾ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಅವಕಾಶ ನೀಡುತ್ತಿಲ್ಲ. ಆದರೆ ಇತ್ತೀಚಿಗೆ ಶ್ರೀಲಂಕಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಟಿ20 ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಇನ್ನು ಅಹ್ಮದಾಬಾದ್‌ನಲ್ಲಿನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದರೆ ಕೊಲ್ಕತ್ತಾದಲ್ಲಿ ನಡೆದ ಟಿ20 ಸರಣಿಗೆ ಕಡಿಮೆ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಿದ್ದನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ.