15ನೇ ಆವೃತ್ತಿಯ ಐಪಿಎಲ್‌ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳು ಟೂರ್ನಿಯ 46ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ನಾಯಕ ಕೇನ್ ವಿಲಿಯಂಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
2022ರ ಆವೃತ್ತಿಯ ಆರಂಭದಲ್ಲಿ ಸೋಲಿನ ಆಘಾತ ಕಂಡಿದ್ದ ಹೈದ್ರಾಬಾದ್, ನಂತರದಲ್ಲಿ ಬಲಿಷ್ಠ ಕಮ್‌ಬ್ಯಾಕ್ ಮಾಡಿದೆ. ಆದರೆ ಬಲಿಷ್ಠ ತಂಡವೆಂಬ ಹಣೆಪಟ್ಟಿ ಹೊಂದಿರುವ ಸಿಎಸ್‌ಕೆ, ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ಭಾರೀ ಹಿನ್ನೆಡೆ ಅನುಭವಿಸಿದೆ. ಹೀಗಾಗಿ ಎರಡು ತಂಡಗಳು ಜಯದ ಹುಡುಕಾಟದೊಂದಿಗೆ ಬಲಿಷ್ಠ ಹಣಾಹಣಿಗೆ ಮುಂದಾಗಿದೆ.
ಸೀಸನ್‌ನಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್, ಮಹತ್ವದ ಬದಲಾವಣೆಯೊಂದಿಗೆ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ರವೀಂದ್ರ ಜಡೇಜಾ ಕ್ಯಾಪ್ಟನ್ ಜವಾಬ್ದಾರಿಯಿಂದ ಕೆಳಗಿಳಿದ ಹಿನ್ನೆಲೆಯಲ್ಲಿ ಎಂ.ಎಸ್.ಧೋನಿ ಮತ್ತೊಮ್ಮೆ ಸಿಎಸ್‌ಕೆ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಹೀಗಾಗಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಚೆನ್ನೈ, ಧೋನಿ ನಾಯಕತ್ವ ಯಶಸ್ಸು ತಂದುಕೊಡುವುದೇ ಎಂಬ ನಿರೀಕ್ಷೆ ಎಲ್ಲರನ್ನ ಕಾಡುತ್ತಿದೆ.
ಉಭಯ ತಂಡಗಳು:
ಸನ್‌ರೈಸರ್ಸ್ ಹೈದ್ರಾಬಾದ್: ಕೇನ್ ವಿಲಿಯಂಸನ್(ನಾಯಕ), ಅಭಿಷೇಕ್ ಶರ್ಮ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾಕ್ರೋ ಜಾನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್, ಟಿ. ನಟರಾಜನ್
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡ್ವೇನ್ ಕಾನ್ವೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ(ನಾಯಕ), ಮಿಚೆಲ್ ಸ್ಯಾಂಟ್ನರ್, ಡ್ವೇನ್ ಪ್ರಿಟೋರಿಯಸ್, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ, ಮಹೀಶ್ ತೀಕ್ಷಣ.